ನನ್ನ ಕಲೆ ನಿನ್ನ ಸೌಂದರ್ಯದೈಹಿಕ ಛಾಯೆ.
ಗಿಳಿಯ ಕಾಣದ ಹಸುಳೆ ಲೆಪ್ಪದ ಗಿಳಿಯ ಕೊಂಡು
ನಲಿವಂತೆ, ನಿನ್ನ ಪಡಿ ನಿನ್ನ ನೆರಳನು ಕಂಡು
ಬೆಮೆಗೊಂಡೆ. ಕಲೆಯಾದರೇನು? ಮೂರ್ತಿಯ ಮಾಯೆ
ಮಾಯೆ! ಮಗುವರಿಯದಿರೆ ಬಲ್ಲವಂಗರಿದೇನು?
ಗಿಳಿಯಲ್ಲ ಗೊಂಬೆಗಿಣಿ; ಸೌಂದರ್ಯವಲ್ಲ ಕಲೆ.
ಕಲೆ ನನ್ನಿಗೊರ್ ದಾರಿ; ನನ್ನಿ ಸೊಬಗಿಂಗೆ ನೆಲೆ.
ಕಲೆಯಾಚೆ ನಿತ್ಯಸೌಂದರ್ಯವಾಗಿಹೆ ನೀನು.
ಕಸದ ನೆರಳನು ಕೆಲರು ಪೊರಕೆಯ ನೆರಳಿನಿಂದೆ
ಗುಡಿಸಲನುಗೈಯುವರು! ನಿನ್ನ ಛಾಯೆಯ ತೋರಿ
ತಿಮಿರಮಾಯೆಯ ಗೆಲ್ಲುವರೆ? ಹುಸಿ! ಕಲೆಯ ಹೀರಿ
ಮೀರಿಹುದು ಸತ್ಯ ಸೌಂದರ ಮಂದಿರಂ ಮುಂದೆ.
ನಿನ್ನ ಪಡೆದರೆ ನನ್ನ ಚಿರಸಖಿ ಕಲೆಯ ಕನ್ನೆ:
ಎಲ್ಲ ಪಡೆದೂ ನಿನ್ನ ಪಡೆಯದಿರೆ ಬರಿ ಸೊನ್ನೆ!

೧೫-೩-೧೯೩೫