ನೋಯುವುದೊ ಬೇಯುವುದೊ ಸಾಯುವುದೊ ನನ್ನ ಎದೆ,
ಭವ್ಯಕವನವ ನಿನಗೆ ನಾನುಲಿಯುತಿರಲೋದಿ,
ನಿನ್ನ ಮುಖ ಕಣ್ಗಳಲಿ ಭಾವನೋಜ್ವಲ ಬೋಧಿ
ಹೊಳೆಹೊಳೆದು ತೊಳಗದಿರೆ. ಅದೆ ಘೋರ ಕಾವ್ಯವಧೆ!
ನಿನಗರ್ಥವಾಗುತಿದೆ? ಹಾಳು ಹೆಣವಾ ಅರ್ಥ!
ನಾ ಬಲ್ಲೆ ನೀನೊಂದು ಪಂಡಿತ ನಿಘಂಟೆಂದು;
ಸುಪ್ರೌಢವ್ಯುತ್ಪತ್ತಿ ವ್ಯಾಕರಣವುಂಟೆಂದು!-
ರಸದೃಷ್ಟಿ ಬಾಹಿರನಿಗೇನಿದ್ದರೂ ವ್ಯರ್ಥ!
ವಾಗ್ದೇವಿ, ನಿನಗಿದೋ ಬಡಕವಿಯ ಪ್ರಾರ್ಥನೆ:
ಪಂಡಿತರು, ನೀರಸರು, ಪೊಳ್ಳುಹೃದಯದ ಮಂದೆ,
ತಮ್ಮ ಭೋಗಗಳೊಡನೆ ಇದು ಒಂದು ಸೇರಿರಲಿ
(ಸಂಸ್ಕೃತಿಯ ಚಿಹ್ನೆಯಲ್ಲವೆ ಹೊತ್ತಗೆಯ ಮನೆ?)
ಎಂಬವರ್ಗೆನ್ನ ಕೃತಿ ಸಿಲುಕುವೊಡೆ, ನಾನಳಿದಂದೆ
ನನ್ನೊಡನೆ ತಾನುಂ ಬೆಂದು ಹೆಣಬೂದಿಯಾಗಿರಲಿ!

೭-೬-೧೯೩೪