ಬಳಿಯಿರುವ ವೆಂಕಯ್ಯ ಕಂಠಯ್ಯ ಕಸ್ತೂರಿ
ಶ್ರೀನಿವಾಸರು ಮೆಚ್ಚಿದರೆ ಸಾಕೆನಗೆ ತೃಪ್ತಿ;
ನನ್ನ ಕನ್ನಡ ಕವನಗಳ ಯಶಸ್ಸಿನ ವ್ಯಾಪ್ತಿ
ಲಂಡನ್ನಿನೊಳಗೂದಬೇಕಿಲ್ಲ ತುತ್ತೂರಿ!
ನಮ್ಮ ಸೊಡರಿಗೆ ಮನೆಯ ಬೆಳಗುವುದೆ ಮೊದಲ ಗುರಿ;
ದೂರದ ನೆಲವ ಬೆಳಗಲಿಲ್ಲೆಂದು ಕೊರಗುವರೆ?
ಬೇಡವೆನ್ನುವುದಿಲ್ಲ, ಸಂತೋಷ, ಬೆಳಗಿದರೆ!
ಆದರದಕಾಗಿ ಮರುಗುವ ಮಂದಿ ಮಂಕೆ ಸರಿ!
ಹಿರಿಯ ಕವಿ ಯಾವನೂ ಹೊನಲುಲು ಹವಾಯ್ಗಳಲಿ
ಕೇಳಿಸುವುದೆಂದೆಣಿಸಿ ತನ್ನ ಕಾವ್ಯದ ವೀಣೆ
ಮಿಡಿಯನೈ, ಬಹುದೂರದಿಲ್ಲಿ ಮೈಸೂರಿನಲಿ
ಕುಳಿತು, ತಂತಿಲಿಯಂಚೆ ನೆರವಾಗಿ ಈ ವಾಣಿ
ಅಲ್ಲಿಯೂ ಕೇಳ್ದುದೆಂದರಿಯೆ ಸೊಗಸುವನಿಲ್ಲಿ:
ಆದರಳನೆಂದಿಗೂ ಕೇಳ್ದುದಿಲ್ಲೆಂದಲ್ಲಿ!

೧೬-೭-೧೯೩೬