ಕ್ಷಣಕ್ಷಣಕೆ ವರ್ಣಾಂತರವನಾಂತು ಮಳೆಬಿಲ್ಲು
ತೊರೆಹರಿಯುತಿಹುದು, ಚಿರ ಚೈತ್ರ ನಂದನ ವಾಸಿ;
ಪಳುಕಿನರೆ, ಹೊಮ್ಮಳಲು; ನವರತ್ನಗಳೆ ರಾಶಿ
ರಾಶಿಯಾಗಿಹ ಬಣ್ಣಬಣ್ಣದ ಹರಳುಕಲ್ಲು;
ಸ್ವರ್ಗಸುಂದರಿಯರ ಜಲಕ್ರೀಡೆ; ಹೂ ತುಂಬಿ
ಕಂಗೊಳಿಸುವಂಚಿನೆಡೆ ಪರಪುಟ್ಟನಿಂಚರಂ,
ಗಿಳಿಗಳುಲಿ, ಮಿಂಚುವ ಪತಂಗಂ, ಮನೋಹರಂ
ಮೋಹನ ಮಯೂರಲಾಸ್ಯಂ, ಝೇಂಕೃತಿಯ ದುಂಬಿ! –
ಪ್ರಾಚೀನತೆಯ ಜೀವ ಸಾರ ಸತ್ವವ ಹೀರಿ,
ಭಾವದೇದೀಪ್ಯವರ್ವಾಚೀನತೆಯ ಮೂರ್ತಿ,
ತಾಪಸಂ, ವೀಚಿದೋಲಿತ ಜಲರುಹದ ಮೇಲೆ
ಮೆರೆದಿರೆ; ನವೀನತೆಯ ನಿಟಿಲನಯನ ಜ್ವಾಲೆ
ಪ್ರಾಕ್ತನದ ನೀರಸ ಕಳೇಬರವನುರಿದೋರಿ
ದಹಿಸುತಿರೆ – ತಾನದಲ್ಲವೆ ಕವಿಮನದ ಕೀರ್ತಿ!

೨೦-೪-೧೯೩೫