ಓ ನನ್ನ ಪ್ರಿಯತಮ ಶಿಖರ ಸುಂದರನೆ, ನನ್ನ
ಜೀವನಾನಂದ ನಿಧಿ ಕವಿತಾ ಮನೋಹರಿಯ
ಪ್ರಥಮೋತ್ತಮಪ್ರಣಯಿ, ವನದೇವಿಯೈಸಿರಿಯ
ಪೀಠ ಚೂಡಾಮಣಿಯೆ, ಓ ಕವಿಶೈಲ, ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ! ನೀಲಗಿರಿ, ಬ್ರಹ್ಮಗಿರಿ,
ಗೇರುಸೊಪ್ಪೆಯ ಭೀಷ್ಮ ಜಲಪಾತ, ಆಗುಂಬೆ,
ಶೃಂಗೇರಿ, ಚಂದ್ರಾದ್ರಿಗಳನೆಲ್ಲಮಂ ಕಂಡೆ;
ವನರಾಜಿ ಜಲರಾಶಿ ಸೂರ್ಯಾಸ್ತಗಳನುಂಡೆ!
ಆದರೇಂ? ಮೀರಿರುವುದವುಗಳಂ ನಿನ್ನ ಸಿರಿ:
ಹೆತ್ತಮ್ಮಗಿಂ ಮತ್ತೊಳರೆ? ತಾಯಹಳೆ ರಂಭೆ?

೨೩-೪-೧೯೩೪

 

ತೆರೆ ಮೇಲೆ ತೆರೆಯೆದ್ದು ಹರಿಯುತಿದೆ ಗಿರಿಪಂಕ್ತಿ
ಕಣ್ಣಟ್ಟಿ ಹೋಹನ್ನೆಗಂ. ಚಿತ್ರ ಬರೆದಂತೆ
ಕಡುಹಸುರು ತಿಳಿಹಸುರು ಹಸುರುಬಣ್ಣದ ಸಂತೆ
ಶೋಭಿಸಿಹುದಾತ್ಮವರಳುವ ತೆರದಿ. ದಿಗ್ದಂತಿ
ಕೊಂಕಿಸಿದ ದೀರ್ಘಬಾಹುವ ಭಂಗಿಯನು ಹೋಲಿ
ಮೆರೆದಿದೆ ದಿಗಂತರೇಖೆ. ಮುಳುಗುತಿದೆ ಸಂಜೆರವಿ
ಕುಂಕುಮದ ಚೆಂಡಿನೊಲು ದೂರದೂರದಲಿ. ಕವಿ
‘ಭಾವಮುಖ’ನಾಗುತಿಹನಾವೇಶದಲಿ ತೇಲಿ!
ಬಳಿ ಕುಳಿತು ಭವ್ಯ ದೃಶ್ಯವ ನೋಡುತಿರುವೆನ್ನ
ಸೋದರನೆ, ಹೃದಯದಲಿ ಯಾವ ಭಾವಜ್ವಾಲೆ
ಪ್ರಜ್ವಲಿಸುತಿದೆ? ಮನದೊಳಾವ ಚಿಂತಾಗಾನ
ರೆಕ್ಕೆಗರಿಗೆದುರುತಿದೆ? ಅಥವ ನೋಟವೆ ನಿನ್ನ
ಸರ್ವಸ್ವವಾಗಿದೆಯೆ? ಇರಲಿ: ನಿನ್ನೆದೆ ಸೋಲೆ
ಸೃಷ್ಟಿಸೌಂದರ್ಯಕದೆ ಅಮೃತಗಂಗಾಸ್ನಾನ!

೨೫-೪-೧೯೩೪

*

ನೋಡಯ್ಯ, ಪ್ರಿಯಬಂಧು, ಚೈತ್ರರವಿಯುದಯದಲಿ
ಸಹ್ಯಾದ್ರಿ ಕಾನನಗಳುತ್ತಮಾಂಗದಿ ಸೃಷ್ಟಿ
ದೃಶ್ಯ ವೈಕುಂಠವನೆ ನೆಯ್ದಿದೆ! ಕಲಾದೃಷ್ಟಿ
ದರ್ಶನವನುದ್ದೀಪನಂಗೈಯೆ ಹೃದಯದಲಿ,
ಪ್ರಾಣಪಕ್ಷಿ ಸುವರ್ಣಪರ್ಣಂಗಳನು ಬಿಚ್ಚಿ
ಹಾರಿಹುದಸೀಮತೆಗೆ! ಕಣಿವೆ ಕಣಿವೆಗಳಲ್ಲಿ
ಮಂಜಿನ ಮಹಾಮಾಯೆ ನೊರೆಯ ರಾಸಿಯ ಚೆಲ್ಲಿ
ವಾರಿಧಿಯ ವಿರಚಿಸಿದೆ, ಕಟುನಿಮ್ನತೆಯ ಮುಚ್ಚಿ.
ನೋಡು, ಆ ಶಿಖರವೆದ್ದಿದೆ ದ್ವೀಪವೆಂಬಂತೆ
ಕ್ಷೀರಫೇನಧಿ ಮಧ್ಯೆ ಶ್ಯಾಮಲ ಶಿರವನೆತ್ತಿ;
ಸ್ವರ್ಗಪ್ರದೇಶದೊಂದಂಶವೆಂಬಂದದಿಂ!
ಪ್ರಿಯಬಂಧು, ಇದು ನಮ್ಮ ದೈನಂದಿನಿಳೆಯಂತೆ
ಕಾಣದೈ: ಸೌಂದರ್ಯ ದೇವತೆಗಳಿದೊ ಸುತ್ತಿ
ಬಿಗಿವರೆಮ್ಮನು ಬಾಹುಬಂಧನಾನಂದದಿಂ!

೧೬-೪-೧೯೩೪

 

ಮಳೆಬಂದು ನಿಂತಿಹುದು; ಮಿಂದಿಹುದು ಹಸುರೆಲ್ಲ;
ಬಿಸಿಲ ಬೇಗೆಯು ಮಾದು, ಬಂದಿಹುದು ಹೊಸತಂಪು;
ಹೊಸತು ಮಳೆ ತೊಯಿಸಿರುವ ನೆಲದ ಕಮ್ಮನೆ ಕಂಪು
ತೀಡುತಿರೆ, ಮಣ್ಣುತಿನ್ನುವುದೇನು ಮರುಳಲ್ಲ!
ವಾಯು ಮಂಡಲ ಶುಭ್ರ; ಗಗನದಲಿ ಮುಗಿಲಿಲ್ಲ;
ಮೈಲುತುತ್ತಿನ ಬಣ್ಣದಗಲ ಗಾಜನು ಹೋಲಿ
ಕಮನೀಯವಾಗಿರಲು ಧೌತಾಂಬರದ ನೀಲಿ,
ಕವಿಗೆ ಮನೆ ಬೇಡೆಂಬುದೊಂದು ಸೋಜಿಗವಲ್ಲ!
ಕರಿದಾಗಿ ಹಸರಿಸಿಹ ಕವಿಶೈಲದರೆಯಲ್ಲಿ
ಬಿಸಿಲಿನಲಿ ಮಿರುಗುತಿವೆ ಕನ್ನಡಿಗಳೆಂಬವೋಲ್
ನಿಂತ ನೀರುಗಳು; ಆವಿಗಳೆದ್ದು, ಅಲ್ಲಲ್ಲಿ,
ನಭಕೇರುತಿವೆ. ಹಕ್ಕಿ ಹಾಡತೊಡಗಿವೆ, ಕೇಳು;
ಹೇ ಬಂಧು, ಸೊಬಗಿನಲಿ ನಿನ್ನಾತ್ಮವನು ತೇಲು;
ಪ್ರಜ್ವಲಿಸಲೈ ಕಲ್ಪನೆ, ಕೆರಳ್ದ ಬೆಂಕಿಯೋಲ್!

೨೬-೪-೧೯೩೪

 

ನಿರ್ಜನತೆ; ನೀರವತೆ; ಕಗ್ಗತ್ತಲಲಿ ಧಾತ್ರಿ
ತಲ್ಲೀನ. ಕೊಟಿಯುಡುಮಂಜರಿಗಳುಪಕಾಂತಿ
ಬೆಳಕಲ್ಲ: ಕಗ್ಗತ್ತಲೆಯ ಛಾಯೆ, ಬೆಳಕಿನ ಭ್ರಾಂತಿ!-
ಏಂ ಶಾಂತಿ, ವಿಶ್ರಾಂತಿ!-ಕವಿಶೈಲದಲಿ ರಾತ್ರಿ:
ತಿಮಿರಪಾನದಿ ಮೂರ್ಛೆಗೊಂಡಂತಿಹ ಜಗತ್ತು
ಮರಳಿ ಕಣ್ದೆರೆದು ಎಚ್ಚರುವ ಚಿಹ್ನೆಯೆ ಇಲ್ಲ;
ಭೀಷಣ ಗಭೀರತೆಯೊಳದ್ದಿದೆ ಭುವನವೆಲ್ಲ;
ರಂಜಿಸಿದೆ ಲಯ ವಿಪ್ಲವದ ಭವ್ಯಸಂಪತ್ತು!
ದೇಹಭಾವವೆ ಹೋಗಿ ನನ್ನಹಂಕಾರಕ್ಕೆ
ಕತ್ತಲೆಯೆ ಕವಚವಾಗಿದೆ; ಇಂದ್ರಿಯಂಗಳಿಗೆ
ಕತ್ತಲೆಯೆ ವಿಷಯವಾಗಿದೆ; ನೋಡೆ ಕಂಗಳಿಗೆ
ಕತ್ತಲೆಯೆ ಕಾಣ್ಕೆ; ಕೇಳಲು ಕಿವಿಗಳೆರಡಕ್ಕೆ
ಕತ್ತಲೆಯೆ ಸದ್ದು!-ನನ್ನೆದೆಯೊಳನುಭವವಿದೇನು?
ಭಯವೊ? ಆವೇಶವೊ? ಅಹಂಕಾರಲಯವೊ ಏನು?

೨೭-೪-೧೯೩೪

 

ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ:
ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!
ಮುಗಿಲ್ದೆರೆಗಳಾಗಸದಿ ಮುಗುಳ್ನಗುವ ತದಿಗೆಪೆರೆ,
ಕೊಂಕು ಬಿಂಕವ ಬೀರಿ, ಬಾನ್ದೇವಿ ಚಂದದಲಿ
ನೋಂತ ಸೊಡರಿನ ಹಣತೆಹೊಂದೋಣಿಯಂದದಲಿ
ಮೆರೆಯುತ್ತೆ ಮತ್ತೆ ಮರೆಯಾಗುತ್ತೆ ತೇಲುತಿರೆ,
ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ
ಸರಸವಾಡುತಿವೆ ಅದೊ ತರುತಲ ಧರಾತಲದಿ!-
ಪಟ್ಟಣದಿ, ಬೀದಿಯಲಿ, ಮನೆಯಲ್ಲಿ, ಸರ್ವತ್ರ
ಇದ್ದೆಯಿದೆ ನಿಮ್ಮ ಹರಟೆಯ ಗಲ್ಲು! ಆ ಸಂತೆ
ಇಲ್ಲೇಕೆ? – ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೆ ಮಹಾಸ್ತೋತ್ರ!

೨೮-೪-೧೯೩೪* ‘ಮಲೆನಾಡಿನ ಚಿತ್ರಗಳು’ ಎಂಬ ಭಾವಪ್ರಬಂಧಗಳ ಕೃತಿಯಲ್ಲಿ ‘ಕವಿಶೈಲ’ ‘ಸಂಜೆ ಗಿರಿ’ ಮೊದಲಾದ ತಾಣಗಳ ವಿಶೇಷ ಪರಿಚಯ ದೊರೆಯುತ್ತದೆ.

* ಮಳೆ ಹೊಯ್ದ ಇರುಳಿನ ಮರುಬೆಳಗಿನಲ್ಲಿ.