ನುಗ್ಗುತಿದೆ ರಭಸದಲಿ ಬಿಂದು ಬಿಂದುವನೊದ್ದು;
ಬೇಗದಲಿ ಹೊಳೆಯ ಹೊನಲನು ನುಂಗುತಿದೆ ವನಧಿ.
ಕ್ಷಣವು ಕ್ಷಣವನು ನೂಂಕಿ ಕ್ಷಯಿಸುತಿದೆ ಕಾಲನದಿ
ಅನವರತ ಗ್ರಾಸಿಷ್ಣು ಶೂನ್ಯಸಿಂಧುವೊಳದ್ದು!
ಕ್ಷುಭಿತ ಜಲರಾಶಿಯಲಿ ವೀಚಿ ಶಿರ ಫೇನದಲಿ
ನಾಗರಿಕತೆಗಳೆಂಬ ಬುದ್ಬುದಗಳೇಳುತಿವೆ;
ಕೆಂಪಿಸುತ ಕ್ಷಣ ನಿಂತು ತತ್ತರಿಸಿ ಬೀಳುತಿವೆ
ಕಾಲತಾಂಡವ ತಾಳಲಯ ವಿಲಯಗಾನದಲಿ!
ದಾನಿ ಕೃಪಣನು ಜ್ಞಾನಿ ಕರ್ಮಿ ತ್ಯಾಗಿಯು ಧರ್ಮಿ
ಎಂಬ ದಯೆ ದಾಕ್ಷಿಣ್ಯ ಪಕ್ಷಪಾತಗಳಿಲ್ಲ;
ಭೈರವ ಮಹಾ ಮುಹೂರ್ತಕೆ ಕೊಚ್ಚುತಿಹರೆಲ್ಲ
ಕರೆಯೆ ಚಿರಮೌನಾಂಬುಧಿಯ ಮೃತ್ಯುಶೀಲೋರ್ಮಿ!
ಅಂಧ ಪ್ರಶ್ನೆಗಳಾವು ಆಶ್ಚರ್ಯಗಳ ಮಧ್ಯೆ!
ಪ್ರಶ್ನೆ ಆಶ್ಚರ್ಯಗಳೆ ನಮ್ಮ ಉನ್ನತ ವಿದ್ಯೆ!

೨೬-೯-೧೯೩೨