ಪೀಡಿಸುತ್ತಿಹೆ ಏಕೆ? ತೊಲಗಾಚೆ, ಕೀರ್ತಿಶನಿ;
ಸಾಕೆನಗೆ ನಿನ್ನ ಸಹವಾಸ ವಿಭವಭ್ರಾಂತಿ!
ಬಾ ಬಳಿಗೆ, ಸಾಮಾನ್ಯತಾ ದೇವಿ, ಓ ಶಾಂತಿ;
ನನ್ನೆದೆಯ ತಂತಿಯಿಂ ಮೀಂಟುತಿದೆ ನಿನ್ನ ದನಿ
ಬ್ರಹ್ಮನಾಡಿಯ ಗುಹ್ಯಗಾನಮಂ. ಋಷಿಮಾನ್ಯೆ,
ಗುರುಕೃಪಾ ಮಹಿಮೆಯಿಂ ರಸದರ್ಶಿ ನಾನಾಗಿ,
ಜಸದ ಕಸುಗಾಯಿ ಹೆಸರೆಳಸದಿಹ ಹಣ್ಣಾಗಿ
ನೋಂತಿರುವುದಸ್ತುತಿಗೆ. ತೃಪ್ತಿಯ ಕಮಲ ಕನ್ಯೆ,
ಕೀರ್ತಿಯ ಮದಿರೆಯಿಲ್ಲದೆಯೆ ಕರ್ಮಗೆಯ್ಯಲ್ಕೆ
ಚೈತನ್ಯವಿರದವರಿಗಿರಲಾ ದರಿದ್ರತಾ
ಪಾನ ಭೋಗಂ. ಪೊನ್ಗೆ ಮಣ್ಗೆ ಪೆಣ್ಗಿಂ ಮಿಗಿಲ್
ಕೀರ್ತಿ ಸಪ್ತಮ ವೈರಿ: ಏಕೆನೆ, ತಿರೆವೊಗಳ್ಕೆ
ಮಾಲೆಯಿಕ್ಕಿದೆ ತನ್ನ ಮೆಚ್ಚನ್: ಆ ಕ್ಷುದ್ರತಾ
ಭೂತಕ್ಕೆ ನಿತ್ಯಬಲಿ: ಆಳ್, ಬಾಳ್, ನೆಲಂ, ನೀರ್, ಮುಗಿಲ್.

೩-೧-೧೯೪೧