ಕಾಳಿದಾಸನ ಮಧುರ ಕಾವ್ಯಪ್ರಪಂಚದಲಿ
ರಾಮಗಿರಿ ನೆತ್ತಿಯಲಿ ವಿಧುರ ವಿರಹದಿ ನೊಂದು
ಜಡವ ಚೇತನಗೆತ್ತು ಯಕ್ಷನೊರ್ವನು ಅಂದು
ಮೇಘದೂತನ ಪ್ರಿಯೆಗೆ ಬಳಿಯಟ್ಟಿದಂದದಲಿ,
ಕೊಳಲಿನಿನಿದನಿ ಕುಣಿದು ಬರೆ ಕರ್ಣಲೋಕದಲಿ,
ವಿಹರಿಸುವೆ ಕಲ್ಪನಾದೃಷ್ಟಿದೂತನನಟ್ಟಿ
ರಾಸಲೀಲಾ ಮೋಹನಾಂಗನನು ಮೈಮುಟ್ಟಿ,
ರಾಧೆಗೋಪಿಯರೊಡನೆ ನೃತ್ಯದಾ ನಾಕದಲಿ.
ವಾಸ್ತವ ಜಗತ್ತು ಭಾವದ ಗಂಗೆಯಲಿ ತೇಲಿ,
ತಲ್ಲೀನವಾಗಿ ವಿಸ್ಮೃತಿಯ ಕಾಳಿಂದಿಯಲಿ,
ಮಗ್ನವಹುದಾನಂದವಾರಿಧಿಗೆ. ನೂರಾರು
ಕಾಮಧನುಗಳ್ ಸ್ವಪ್ನಸುಂದರಿಯರನು ಹೋಲಿ
ನರ್ತನಂಗೈದು ಬರೆ ಮೋಹಶೃಂಗಾರದಲಿ,
ಸಂಗೀತಸ್ರೋತದಲಿ ನಾನು ಬಣ್ಣದ ನೀರು!

೧೪-೯-೧೯೩೩