ಕ್ರಾಂತಿಕಾಳಿ ಕಠಾರಿಯಂ ನನ್ನೆದೆಗೆ ಕುರಿತು
ಝಳಪಿಸುತೆ, ಬದ್ಧಭ್ರುಕುಟಿ ಕೋಪದಲಿ ನಿಂತು,
ದಂಷ್ಟ್ರಘರ್ಷಣರವಂ ಪೊಣ್ಮೆ ಗಜರಿದಳಿಂತು: –
ಓ ದ್ರೋಹಿ ಕವಿಯೆ, ನಿನಗಿತ್ತಾಣತಿಯ ಮರೆತು
ಕ್ಲೀಬತನದಲಿ ಹೆಣ್ಣುಸೋಬಾನೆಗಳ ಹಾಡಿ
ಪಾಳ್ಗಯ್ದೆ ಕಜ್ಜಮಂ! ಶುಕ, ಪಿಕ, ವಸಂತ, ಲತೆ,
ಮುಂಗುರುಳು, ತಂಗಾಳಿ, ದೊರೆಗಿರೆಗಳಜ್ಜಿಕಥೆ,
ಬೆಳ್ದಿಂಗಳೆಂಬುವಂ ನೂಕಾಚೆ, ಹೆಂಬೇಡಿ!
ಬಡತನಂ, ಗೊಬ್ಬರಂ, ಕತ್ತಿ, ಗುದ್ದಲಿ, ಹಾರೆ,
ಬೆವರು, ನೆತ್ತರ್ಗಳಂ ಗಾನಗೈವುದು ನಿನ್ನ
ಕರ್ತವ್ಯವಿಂದು. ಹಾ! ಹೊಟ್ಟೆಗಿಲ್ಲದೆ ಅನ್ನ
ಬಡಜನರು ಸಾಯುತಿರೆ, ರಸಗಂಧವನು ತೋರೆ
ತಣಿವಹುದೆ? ಕ್ರಾಂತಿಕಾಳಿಯು ನಾನು, ಕೈಬೀಸಿ!
ಕರೆಯೆ, ಬಾ, ಪೂಜೆಗೈ ಹೃದಯ ರಕ್ತವ ಸೂಸಿ!

೨೨-೧-೧೯೩೫