ನನ್ನ ಹಿತಕೇನು ಬೇಕೆಂಬುದನು ನೀ ಬಲ್ಲೆ
ನನಗಿಂತಲೂ ನೂರುಮಡಿ ಲೇಸು! ನನ್ನಕ್ಷಿ
ತಾತ್ಕಾಲಿಕಂ. ರುಚಿಯೆ ಪಥ್ಯವೆಂದೆನೆ, ಕುಕ್ಷಿ
ವೈದ್ಯನಾದಂತೆ! ರುಚಿಮಾತ್ರ ಸುಖಕಾನೊಲ್ಲೆ.
ನಾನು ಪರತಂತ್ರನಹೆ ನಿನ್ನ ಸ್ವಾತಂತ್ರ್ಯದಿಂ;
ನನ್ನ ಸ್ವಾತಂತ್ರ್ಯದಿಂ ನಿನ್ನ ಬಲ್ಮೆಗೆ ಕುಂದು.
ನಮ್ಮಿಚ್ಛೆಗಳು ಪರಸ್ಪರತಂತ್ರವಾದಂದು
ತೊಡಕೆಲ್ಲ ಮಾಯೆಯಾಗುವುದೊಲುಮೆ ಮಂತ್ರದಿಂ.
ನನ್ನ ಕಣ್ ಮೊದಲ ಬೆಳಕನು ಕಂಡ ಕಾಲದಿಂ
ಬನ ಬಾನು ತಳಿರು ಹೂ ಹಣ್ಣು ಹಾಲಂತಾಗಿ
ಸತ್ಕರಿಸುತಿಹೆ ನೀನು, ಲೋಕ ಮೋಹಕ ಮೂರ್ತಿ.
ನಿನ್ನ ಕೈ ನನ್ನ ಕಲ್ಪನೆಯ ಪಾತಾಳದಿಂ
ದೋಟಿಯಂದದಿ ಮೂಡೆ, ಕಲ್ಪವೃಕ್ಷಂ ಬಾಗಿ
ಕುಸುಮ ಕೋಟಿಯ ಕರೆವುದದುವೆ ಜೀವಸ್ಫೂರ್ತಿ!

೨೦-೮-೧೯೩೬