ಭ್ರಮಿಸುತಿದೆ ಮತಿ; ಬೀಳುತಿದೆ ಕಲ್ಪನೆಯ ಪಕ್ಷಿ
ಹಾರಲಾರದೆ ಹಾರಿ ತತ್ತರಿಸಿ! ಓ ವಿದ್ಯೆ,
ನಕ್ಷತ್ರ ನೀಹಾರಿಕಾಗ್ನಿ ತೀರ್ಥದ ಮಧ್ಯೆ
ಮಿಂದು ಉರಿಮೆಯ್ವಡೆದ ನೀನು ಮೂರನೆಯಕ್ಷಿ
ನನ್ನಾತ್ಮ ಶಿವಲಲಾಟಕ್ಕೆ. ‘ಬೆಳಕಿನ ವರ್ಷ’
ಕೋಟಿಕೋಟಿಯನಲೆದು, ಕಾಲದೇಶಾನಂತ
ವಿಶ್ವದೊಳಿಳಿದು, ಮೂರ್ಛೆಹೋಗುತಿಹುದೀ ಭ್ರಾಂತ
ಮಮತೆ; ಮಾನುಷತೆಗಾಗಿದೆ ಬ್ರಹ್ಮತಾ ಸ್ಪರ್ಶ!
ನನ್ನ ಮೈ, ನನ್ನೂರು, ನಾನು, ಸಂಸ್ಕೃತಿ, ಬಲುಮೆ
ಎಂಬ ಮುದ್ದಿನ ಮೋಹಗಳಿಗೆಲ್ಲ ನೀ ಮದ್ದು,
ಓ ಖಗೋಲದ ವಿದ್ಯೆ: ಬಡಬಾನಳನ ಕುಲುಮೆ
ಮೌಢ್ಯಕಿಲ್ಬಿಷಕೆ! ಬಾವಿಯ ಕಪ್ಪೆಯಾಗಿದ್ದು
ಹೆಮ್ಮೆ ಪಡುತಿದ್ದೆನ್ನನೊಮ್ಮೆಯೆ ಸಮುದ್ರಕ್ಕೆ
ಬೀಸಿದಂತಿದೆ: ಯಾತ್ರೆ ಮಹತೋಮಹೀಯಕ್ಕೆ!

೨೨-೮-೧೯೩೫