ಸಾಗುತಿದೆ ದೇವೇಂದ್ರನೈರಾವತಂ. ಬಳ್ಳು
ಬಯ್ವವೋಲೂಳುತಿದೆ, ಅಕೊ ಅಲ್ಲಿ, ನಾರುವ
ಚರಂಡಿಯಲಿ ನಿಂತು. ‘ತನ್ನಾ ಬಳಿಗೆ ಸಾರುವ
ಪರಾಕ್ರಮಂ ಗಜವರೇಣ್ಯಂಗೆಲ್ಲಿ? ತೆಗೆ, ಸುಳ್ಳು!’
ಎಂಬುದಾ ಸ್ವಾನಕ್ಕೆ ಪಿತ್ತಗರ್ವಂ. ಆನೆ
ಎಳ್ಳನಿತ್ತಾದೊಡಂ ಲೆಕ್ಕಿಸದೆ ತನ್ನೊಂದು
ಗುರಿಗೆ ಗಮಿಸಿರೆ, ‘ಹೇಡಿ ಹಿಂಜರಿಯುತಿದೆ’ ಎಂದು
ಕುನ್ನಿ ‘ಕೇಸರಿ’ ಬಿರುದ ಕೊಳ್ವುದು ತನಗೆ ತಾನೆ!
ಗತಿಯ ಛಂದಕೆ ಘೋಷಿಸಿರೆ ಕಂಠದಲಿ ಘಂಟೆ,
ನಂದನದ ಗಂಧಮಾರ್ಗದಿ, ಮೀಯೆ ಗಂಗೆಯೊಳ್,
ಚಲಿಸುವಾ ಅಚಲತೆಯ ಗರುವಗಮನಕ್ಕೆ, ಪೇಳ್,
ಗಲ್ಲಿಯ ವಿಮರ್ಶೆಯೂಳ್ ಕಿವಿಗೆ ಬೀಳುವುದುಂಟೆ?
ಆದರಾ ಗ್ರಾಮಸಿಂಹಗೆ ದಿಟವನೊರೆವನಾವನ್?
ಓ ತಿಪ್ಪೆಗದ್ದುಗೆಯೆ, ನೀನಾದರೂ ನಾರ್ ಅದನ್!

೩೧-೩-೧೯೪೧