ಸೂರ್ಯನಂ ಸುತ್ತುತಿಹ ಪೃಥ್ವಿಯ ಮಹಾಛಾಯೆ
ಬಹುದೂರದಾಕಾಶದೇಶದಿ ಚಲಿಸಿ ಬೀಳೆ
ದೃಗ್ಗಣಿತ ನಿಯಮದಿಂದಿಂದುಗೋಲದ ಮೇಲೆ
ಗ್ರಹಣಮಹುದೆಂದು ವಿಜ್ಞಾನ ತೋರಿದೆ. ಮಾಯೆ
ಹಿಡಿದಿರುವುದೆಮಗೆ! ಚಂದ್ರನಿಗೆಲ್ಲಯದು ರಾಹು?
ಬಾ, ಸನ್ಮತಿಯ ದೀಪಧಾರಿ, ಓ ಸಾಕ್ರೆಟೀಸ್,
ನಮ್ಮ ಭಾರತವಿಂದು ನೀನು ಬರಲಿರ್ದ ಗ್ರೀಸ್!
ಕೊಲ್ಲುತಿಹುದಜ್ಞಾನ ಸಂಪ್ರದಾಯದ ಬಾಹು
ನಮ್ಮ ಬದುಕಿನ ಕುತ್ತಿಗೆಯ ಹಿಸುಕಿ. ನಾಸ್ತಿಕತೆ
ನಷ್ಟಹಾನಿಯ ದುಷ್ಟಮೌಢ್ಯಕಿಂತತಿ ಲೇಸು!
ಗುರು ಬುದ್ಧದೇವ ನಾಸ್ತಿಕನಾದರವನ ಜೊತೆ
ನರಕವೆನಗಿರಲಿ. ಮೇಣಂತೆ ಕ್ರಿಸ್ತನ ಕ್ರಾಸು
ಯಜ್ಞಯೂಪದ ಪಾಪಗಳ ತೊಳೆವ ಪುಣ್ಯಕಥೆ.
ದಾಸ್ಯಮತಿ ಸೈತಾನ್; ನಿರಂಕುಶಮತಿಯೆ ಯೇಸು!

೧೯-೧-೧೯೩೫