ಸುತ್ತಿದನು ಪೃಥ್ವಿಯಂ ಸಮರಶೇಷಂ, ತನ್ನ
ನಾನಾ ರಣದ ಫಣೆಗಳಂ ನಿಮಿರಿ, ಮೃತ್ಯುಮಯ
ಗರಳದಿಂ ದೇಶದೇಶದ ಬಾಳ್ಗೆ ಕಷ್ಟ ಭಯ
ಶೋಕ ರುಜೆ ದಾಸ್ಯಗಳನಡಕಿ. ಕೊಲ್ಲುವ ಮುನ್ನ
ಕಾಳಕೂಟವ ಕುಡಿವ ಕೈಲಾಸಪತಿಯೆಲ್ಲಿ?
ಬಹನೊ? ಶಾಂತಿಯ ತಹನೊ? ಕಣಿಯನೊರೆಯುವರಾರು?
ಅಟ್ಲಾಂಟಿಕದ ಬಿಸಿಗೆ ಶಾಂತ ಶರಧಿಯ ನೀರು
ತಕಪಕನೆ ಕುದಿಯತೊಡಗಿರೆ, ಬರಿಯ ಬಲದಲ್ಲಿ,
ಕಾಣೆನಾಂ ಪಾರ್ವತಿಯ ಕೃಪೆಯ ಕೈಯಂ. ಮತ್ತೆ? –
ಸೋಲ್ವುವೆ ಜನಾಂಗಗಳ್ ವ್ಯಕ್ತಿ ಸೋಲ್ವಂತೆವೋಲ್?
ಇಂದು ಸೋತುದೆ ಮುಂದಕಿರ್ಮಡಿಯ ರೋಷದಿಂ
ಮಲೆತು ಕೆಣಕದೆ ಯುದ್ಧಭೂತಮಂ? – ಬರಿ ಮಿಥ್ಯೆ
ಶಾಂತಿ, ಬರ್ಪನ್ನೆಗಂ ಸಮತೆ. ವೇದವಿದು ಕೇಳ್:
ಶಾಂತಿಗೊಂದೇ ದಾರಿ, – ಸರ್ವಸಂತೋಷದಿಂ!

೯-೨-೧೯೪೨

 
* ಚಿತ್ರಭಾನು : ೧೯೪೨ನೆಯ ಇಸವಿ; ಎರಡನೆಯ ಮಹಾಯುದ್ಧದ ಮಧ್ಯಕಾಲ; ಯುದ್ಧಜ್ವಾಲೆ ಪೂರ್ವರಾಷ್ಟ್ರಗಳಿಗೂ ಪೂರ್ಣವಾಗಿ ಹಬ್ಬಿ, ಜಪಾನು ಯುದ್ಧದ ಅಗ್ನಿಕುಂಡಕ್ಕೆ ದುಮುಕಿದ ಸಮಯ.