ಬಾಳ ಕೊಳುಗುಳದಲ್ಲಿ ಬೀರ ತುಳಿಲಾಳಾಗಿ

ಹೋರಿಯಂದದಿ ಹೋರಿ ಮಡಿದ ನಿನ್ನಾ ಮೃತ್ಯು
ಧರ್ಮ ಕ್ಷುಧೆಗೆ ಚಿರಂಜೀವದಮೃತದ ತುತ್ತು,
ಟಾಲ್‌ಸ್ಟಾಯ್! ನಿರಂಕುಶಮತಿಯೆ, ಶಮದಮಕ್ಕಾಗಿ
ಸಮೆದೆ ನಿನ್ನಾತ್ಮಮಂ. ಸೌಖ್ಯದ ಸಿರಿಯ ತೊರೆದು
ದುಃಖದಾರಿದ್ರ್ಯಮಂ ಕೆಳೆಗೊಂಡೆ. ಬೇಸತ್ತು
ಮತದ ಬೂಟಾಟಿಕೆಗೆ, ಅದರ ಹುತ್ತವ ಕಿತ್ತು,
ಬೆಳ್ಳೊರಲೆಗಳ ನೊಣೆಯೆ ವಿಪ್ಲವ ಫಣಿಯನಿರಿದು
ಕೆರಳಿಸುತೊಳಗೆ ಬಿಟ್ಟೆ! ಕ್ರಾಂತಿಕಾರನೆ ಮಾತ್ರ
ನೀನಲ್ತು; ಕಾವ್ಯರಸನಂದನ ಕೃಷಿಕನಾದೆ.
ಮನುಜ ಜೀವನ ರಂಗಭೂಮಿಯಲಿ ತವಪಾತ್ರ
ನೈಕಮುಖಿ. ಸಾಧಕವರೇಣ್ಯ, ಸತ್ಯದ ಬೋಧೆ
ನಿನ್ನಿಂದೆ ಮಿಂಚಾಯ್ತು. – ಹೋರಾಡುತಲೆ ಬಿದ್ದೆ;
ಸೋತಂತೆ ತೋರ್ದರೂ, ರಸಋಷಿ, ದಿಟದಿ ಗೆದ್ದೆ!

೨೦-೩-೧೯೩೫