ಶಾಂತವಾಗಿದೆ ಸಂಧ್ಯೆ; ಮೃದುಲ ಸಾಯಂ ಕಾಂತಿ
ವ್ಯಾಪಿಸಿದೆ ಭೂಮಿ ವ್ಯೋಮಂಗಳಂ; ನಭದಲ್ಲಿ,
ಕೆನ್ನೀಲಿ ಹಳದಿಯಲಿ, ಮಿರುಗುತಿಹುದಾ ‘ಬೆಳ್ಳಿ’
ಥಳಿಸಿ! ಈ ದಿವ್ಯವೈಶಾಖ ಸಂಧ್ಯೆಯ ಶಾಂತಿ,
ಮೊರೆಮೊರೆದು ಭೋರ್ಗರೆದು ಕಲ್ಗಳೆಡೆ ನೊರೆಸೂಸಿ
ಹರಿವ ಈ ತುಂಗೆ, ಕರಿಯಾನೆಗಳ ಹಿರಿದಂಡು
ಬಿದ್ದವೋಲೆಸೆವ ಈ ಹೆಬ್ಬಂಡೆಗಳ ಹಿಂಡು,
ಸಂಜೆಗೆಂಪೊಳು ಮಿಂದು ಹಬ್ಬಿದ ಮಳಲ ರಾಶಿ,
ಎಲ್ಲವೂ ಚಿರ ಚಿತ್ರಗತವಾದವೊಲು ತೋರಿ,
ಸ್ಥೂಲ ಜಡವೆಂಬ ವಾಸ್ತವತೆ ಮನದಿಂ ಮಾಸಿ
ಕಣಸಾಗಿ ಮೂಡುತಿದೆ: ವಿಶ್ವಕವಿವರನ ಕಾವ್ಯಂ
ಭುವನವಿದು. ಸುರಗಾನದಾ ಛಂದಸನೆ ಸಾರಿ
ಹರಿಯುತಿದೆ ಹೊಳೆ; ನಿಂತಿಹುದು ಬಂಡೆ; ಇದೆ ಬೀಸಿ
ತಂಗಾಳಿ! ಅಃ ಆಲಿಸಾ, ಎನಿತು ಸುಶ್ರಾವ್ಯಂ!

೨೩-೫-೧೯೩೫