ನರಳುತಿಹುದಡಿಗಲ್ಲು ಹರ್ಮ್ಯಭಾರವ ಹೊತ್ತು
ಭೂಗರ್ಭ ತಿಮಿರದಿ ಸಿಲುಕಿಬಿದ್ದು; ನಭಕೆತ್ತಿ
ಕಾರ್ತಸ್ವರಾಲೇಪನದ ಗೋಪುರದ ನೆತ್ತಿ
ನಗೆಮಿಂಚನೆಸೆದು ತಳಹದಿಯನಣಕಿಸಿದತ್ತು!
ಸಿರಿಯ ಕಳಶದ ಕಿವಿಗೆ ಬಡ ತಳಹದಿಯ ಗೋಳು
ಬೀಳುವುದೆ? ರಜತ ಜಿಹ್ವಾ ವಾಗ್ಮಿ, ಹಸಿದ ಹುಲಿ
ನಖದಂಷ್ಟ್ರಗಳನೆ ಕಾಣಿಕೆಯಿತ್ತು ಕಾಲಬಳಿ
ಮೂಲಗಿಸಲದನಾವ ಹೆಸರಿಂ ಕರೆವೆ ಹೇಳು?
ಬೆಳ್ಳಿನಾಲಗೆ ಸಾಲದಯ್ಯ, ವಜ್ರದ ಮುಷ್ಟಿ
ಬೇಕಿಂದೆಮಗೆ: ಸೆರೆಯ ಕಬ್ಬಿಣ ಸರಳನೊಡೆಯೆ,
ನುಣ್ಪು ನಾಯಕರಲ್ಲ, ಬೇಕೆಮಗೊರಟು ಮಂದಿ.
ತ್ಯಾಗವಿಲ್ಲದ ದೇಶಭಕ್ತಿ ಕ್ಲೈಬ್ಯಕೆ ಯಷ್ಟಿ!
ನೋಯಿಸಲು ಮನಸುಂಟು, ಕೆಚ್ಚು ಸಾಲದು ಹೊಡೆಯೆ!
ಸಮರ ಸಾಹಸರಾಹ! ಮಾತೆತ್ತಿದರೆ ‘ಸಂಧಿ’!

೨೯-೧-೧೯೩೫