ಬೆದರದಿರು, ಬೆದರದಿರು; ಬೇಡ ಈ ಸಂದೇಹ,

ಓ ನನ್ನ ಕವಿಮಿತ್ರ. ನಾನಳಿದರೇನಂತೆ?
ಕಾರ್ಮುಗಿಲು ಕವಿದರೇನಂತೆ? ನಿನಗಾ ಚಿಂತೆ
ಬೇಡ; ಬಿಡು ನೈರಾಶ್ಯವನು. ನನ್ನ ಜಡದೇಹ
ಹತವಾಯ್ತು; ನನ್ನಾತ್ಮ ಸಂಗ್ರಾಮ ಗತವಾಯ್ತು.
ಒಬ್ಬನಾಗಿದ್ದವನು ಕೋಟಿಯಾಗಿಹೆನಿಂದು!
ಸ್ವಾತಂತ್ರ್ಯವನು ಕೊಲ್ಲುವರೆ ಒಬ್ಬನನು ಕೊಂದು?
ನನ್ನ ಮೃತ್ಯುವೆ ನನ್ನ ವೈರಿಗೆ ಪತನವಾಯ್ತು.
ಶತಮಾನಗಳು ಬದುಕಿ ಬಾಳಿರುವ ಭಾರತಿಗೆ,
ಲೋಕಕ್ಕೆ ನೂರಾರು ಜೀವಮಣಿಗಳ ಹೆತ್ತು
ದಾನಮಾಡಿಹ ಮಾತೃದೇವತೆಯ ಸದ್ಗತಿಗೆ
ನನ್ನ ನಿಧನದಲಿ ಕುಂದಹುದೆ? ಒಬ್ಬನ ಮಿತ್ತು
ಮತ್ತೊಬ್ಬನೇಳಿಗೆಗೆ ತುತ್ತಲ್ತೆ? – ಪಡುವಲೊಳ್
ತಾರೆ ಮುಳುಗಿತೆ? ನೋಡು, ಮತ್ತೊಂದು ಮೂಡಲೊಳ್!

೨೫-೭-೧೯೩೩