ತಾಯೆ ಭಾರತಿ, ನಿನಗೆ ಸ್ವಾತಂತ್ರ್ಯ ಬಹ ಮುನ್ನ
ನಾನಳಿವೆನೇನೊ ಎಂಬಾ ಶಂಕೆಯೊಮ್ಮೊಮ್ಮೆ
ಪೀಡಿಪುದು ಮನಮಂ. ಸ್ವತಂತ್ರಿ ಎಂಬುವ ಹೆಮ್ಮೆ
ಈ ಜನ್ಮದಲಿ ನನಗೆ ಲಭಿಸದಿರೆ, ಮತ್ತೆನ್ನ
ಮರುವುಟ್ಟಿನಲ್ಲಾದೊಡಂ ಪೆತ್ತು ಈ ನಿನ್ನ
ಕಂದನ ಬಯಕೆಯಂ ಸಲಿಸಿ, ದೇವಿ, ಕೃಪೆದೋರು!
ಹುಟ್ಟಿಸೆನ್ನಂ ಮರಳಿ ಮರಳಿ, ಬಂಧನ ನೂರು
ಚೂರಾಗಿ ನಿನಗೆ ಮೋಕ್ಷಂ ಪೂರ್ಣ ದೊರೆವನ್ನ!
ಹಿರಿದಹುದು ಸಂಕೋಲೆ; ಕಿರಿದು ನನ್ನೀ ಬಲ್ಮೆ.
ಆದೊಡೇಂ? ಪೊಳ್ತನಿತ್ತರೆ ಒರಲೆ ಕೊರೆಕೊರೆದು
ಕೆಡಹಲಾರದೆ ಹೆಮ್ಮರನ? ಅಂತೆ ಏ ಒಲ್ಮೆ
ಹಿರಿದಾಗಿರಲು ಬಲ್ಮೆಕಿಡಿ ತಾನೆ ಕಾಳ್ಗಿಚ್ಚು
ಕಾಲಾನುಕಾಲಕ್ಕೆ! ಹೀನ ಸ್ವಾರ್ಥವ ತೊರೆದು
ಸ್ವಾತಂತ್ರ್ಯ ಮಖಕೆ ಪಶುವಹುದೆನ್ನ ಸಿರಿಹುಚ್ಚು.

೨೫-೧-೧೯೩೫