ಸರಸತಿಯ ಬೀಣೆಗೊದಗಿಸೆ ತಂತಿಯಂ, ಧನ್ಯೆ
ದಲ್ ಲಕ್ಷ್ಮಿ! ಲೌಹನಿನದಮೆ ವೈಣರವಮಾಗಿ
ಪೊರೆವುದು ಚಿರಂತನದ ಸುರಗಾನದಿಂ, ತ್ಯಾಗಿ,
ನಿನ್ನ ಜಸಮಂ ವಿಸ್ಮೃತಿಯ ಮೃತ್ಯುವಿಂ. ಮುನ್ನೆ
ವಿಕ್ರಮಾರ್ಜುನ ವಿಜಯಮಂ ಬರೆದು ಪಂಪಕವಿ
ಕೊರೆದನರಿಕೇಸರಿಯ ಪೆಸರಂ ಚಿರಂ ಬಾಳ್ವ
ಕೃತಿಶಿಲಾಶಾಸನದಿ. ಕಾವ್ಯವೋದುವ ಕೇಳ್ವ
ಕನ್ನಡಿಗರೆಲ್ಲರ ಕೃತಜ್ಞತೆಗೆ, ಚಂದ್ರ ರವಿ
ಪೊಳೆವನ್ನೆಗಂ, ಪಾತ್ರನಾಗಿರ್ಪನಾ ನೃಪತಿ,
ತನ್ನುಳಿದ ಕಜ್ಜಗಳ್ ತನ್ನ ರಾಜ್ಯಂಗೂಡಿ
ಪೇಳೆ ಪೆಸರಿಲ್ಲದಾಗಿರ್ಪೊಡಂ. ದಿವ್ಯಕೃತಿ,
ಹೇ ಧನಿಯೆ, ನಿನ್ನ ದಾನವನಮೃತಮಂ ಮಾಡಿ,
ನಿನ್ನಾತ್ಮಕಮೃತತೃಪ್ತಿಯನೀವುದಾವಗಮ್:
ನಿನಗಕ್ಕೆ ಆ ಸೈಪಿನಾ ಶಾಂತಿಯಾ ಸೊಗಮ್.

೧೮-೮-೧೯೪೧

 
* ವಿಶ್ವವಿದ್ಯಾನಿಲಯವೊಂದರ ಪ್ರತಿಷ್ಠಾಪನೆಗಾಗಿ ವಿಪುಲ ಧನಾರ್ಪಣೆ ಮಾಡಿದ ಮಹಾದಾತೃವೊಬ್ಬನ ನೆನಪಿಗಾಗಿ.