ಬುವಿಯು ನಿದ್ದೆಯೊಳದ್ದಿ ಮೋನಮಿಹ ಹೊತ್ತಿನಲಿ

ನಟ್ಟಿರುಳಿನಾಳದಲಿ ನಿಲುತೆ ಬಾನಡಿಯಲ್ಲಿ
ನಿಟ್ಟಿಸಿದೆ ಮೊಗವೆತ್ತಿ: ಬೆಳುದಿಂಗಳನು ಚೆಲ್ಲಿ
ತಣ್ಗದಿರನೆಸೆದನಾಗಸದ ನಡುನೆತ್ತಿಯಲಿ,
ರಂಗವಲ್ಲಿಯ ಬರೆದ ಬೆಳ್ಮುಗಿಲ್ಗಳಂಗಣದಿ.
ಮಿನುಗಿದುವು ತಾರೆಗಳು. ಮೌನಜಲನಿಧಿಯಲ್ಲಿ
ಭೂಮಿ ಸಗ್ಗಗಳೆರಡುಮೊಂದೆ ಚುಂಬನದಲ್ಲಿ
ಮುಳುಗಿದುವು ಸಿಲುಕಿ ಸವಿಗನಸಿನಾಲಿಂಗನದಿ!
ಸೃಷ್ಟಿ ಹೃದಯಾಂತರದಿ ಮೆಯ್ಗರೆದು ನೆಯ್ಯುತಿಹೆ
ಕಲೆಯ ಬಲೆಯನು, ಮೋಹಮಯಿ ಓ ಕಲಾಸುಂದರಿಯೆ:
ಯಾವ ರಮಣನ ಮನೋರಂಜನೆಗೊ ನಾನರಿಯೆ,
ಬೇಸರದೆ ಯಗಗಳಿಂ ಸಾಹಸಂಗೆಯ್ಯುತಿಹೆ
ದಿನದಿನಂ! – ನಾವು ನೋಡಿದರೇನು? ಬಿಡಲೇನು?
ಯಾರ ಬಣ್ಣನೆಯನೂ ಹಾರದಿಹ ಸಿರಿ ನೀನು!

೧೧-೯-೧೯೩೧