ನೀನೇರಬಲ್ಲೆಯಾ ನಾನೇರುವೆತ್ತರಕೆ?
ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ?
ನೀ ಮುಳುಗಬಲ್ಲೆಯಾ ನಾ ಮುಳುಗುವಾಳಕ್ಕೆ?
ಇಲ್ಲ? ನಡೆ, ದೂರಸರಿ! ಹೌದು? ಬಾ, ಹತ್ತಿರಕೆ!
ನಿನ್ನ ನಾಡಿಯಲಿ ಕೆನ್ನೆತ್ತರು ಹಸುರ್ಗಟ್ಟಿ
ನೋಡುತಿರೆಯಿರೆ ನೀನೆ ನೋಡುವಾ ಮರವಾಗಿ
ತೆಂಗಾಳಿಯಲಿ ತಳಿರ ತೊಂಗಲ ತಲೆಯ ತೂಗಿ
ನಲಿವನ್ನೆಗಂ ದೂರ? ಬಳಿಕ ಬಾ ಮೈಮುಟ್ಟಿ.
ಭಾವ ಬುದ್ಧಿಗಳಮಲ ವಿದ್ಯುದಾಲಿಂಗನಕೆ,
ಹೃದಯಾಗ್ನಿ ಸ್ಪರ್ಶಕ್ಕೆ, ಜಡವೆಲ್ಲ ಕಿಡಿಯಾಗಿ
ಹುಡಿಮಣ್ಣು ಮಿಂಚುವುದೆ ಚೇತನದ ಗುಡಿಯಾಗಿ?-
ಎನಿತು ಹಿರಿದಾದರೂ ನಿನ್ನ ಪಂಡಿತತನಕೆ
ನಿಲುಕೆನೈ: ನಾನು ಆನಂದ-ಉನ್ಮಾದಿನಿ,
ದಿವ್ಯಾನುಭೂತಿ ಸಂಭೂತ ರಸವಾಹಿನಿ!

೯-೩-೧೯೩೪