ನಾ ನಿನ್ನ ಬಿಡೆನಯ್ಯ, ನನ್ನ ದೇವರು ನೀನು:
ನೀನೊಡನೆ ಇರಲು ಮರುಧರೆ ನಂದನೋದ್ಯಾನ;
ನೀನಿಲ್ಲದುದ್ಯಾನವದುವೆ ಮರುಧರೆ ಕಾಣ.
ನಿನ್ನ ಬಿಟ್ಟರೆ ಹರಣವನು ತೊರೆದ ಶವ ನಾನು!
ನನ್ನೆದೆಯ ಮೈಲಿಗೆಯ ನಿನ್ನೊಲುಮೆ ಕಣ್ಣೀರು
ತೊಳೆಯುತಿದೆ. ನನ್ನ ಚೈತನ್ಯದೀಪದ ಬತ್ತಿ
ನಿನ್ನ ಸೌಂದರ್ಯ ಸಂಸರ್ಗಮಾತ್ರದಿ ಹೊತ್ತಿ
ಉರಿಯುತಿದೆ. ನನ್ನ ಬಾಳಿನ ತಾವರೆಯ ತೇರು
ಸಾಗುತಿದೆ ನಿನ್ನ ಶೃಂಗಾರ ರಂಗದ ಮೇಲೆ
ಸುಖದ ಮಂದಾಕಿನಿಯ ರಸಸಲಿಲದಲಿ ತೇಲಿ
ತೇಲಿ. ನನ್ನೆಳೆತನಕೆ ಕರುಣೆದೊಟ್ಟಿಲ ತಾಯಿ;
ಬಾಲ್ಯದಾಟಂಗಳಿಗೆ ಒಡನಾಡಿ; ಉಯ್ಯಾಲೆ
ತರುಣತೆಗೆ; ಕೇಲಿ ಯೌವನಕೆ; ಮರಣಕೆ ಕಾಳಿ;
ಓ ಚಿರಸುಧಾ ಮೂರ್ತಿ, ನನ್ನ ಕೈಹಿಡಿ, ಕಾಯಿ!

೧೬-೩-೧೯೩೫