ನನ್ನ ಭಾವದ ಧೀರ ಭಾರಕ್ಕೆ ವೇಗಕ್ಕೆ
ಚಟುಲ ರಣತೇಜಿ ಈ ಭೀಮಸುಂದರ ಶೈಲಿ:
ಹತ್ತದನು ನೀನೆಲ್ಲವೂ ನೆತ್ತರಿದ್ದರೆ ಮೈಲಿ!
ಬಡಕಲಾದವಗೆ ನಾಗಾಲೋಟದಿಂ ಪಕ್ಕೆ
ನಿರಿನಿಟಿಲು ಮುರಿದಪ್ಪುದಸ್ಥಿಚೂರ್ಣದ ಥೈಲಿ.
ಕೈಲಾಗದೆಯೆ ಹತ್ತಿ ಮೈ ನೊಂದರೇಂ ತಪ್ಪೆ
ಕುದುರೆ? ಮೈ ಕೊಬ್ಬೆಂದು ದೂಷಿಸುವೆ! ಬಿಡು, ಬೆಪ್ಪೆ,
ನಿನಗಲ್ಲವೀ ತೇಜಿ – ಈ ದೈತ್ಯ ಕವಿಶೈಲಿ!
ನಿನ್ನ ಭಾವದ ಮೆಯ್ಯ ಪುಷ್ಟಿಗೊಳಿಸೈ ಮೊದಲು;
ತೋರ್ಪುದಾಗೆನ್ನ ಶೈಲಿಯ ಮಹಿಮೆ. ಭೂರ್ಭುವನ
ಸ್ವರ್ಗಂಗಳಂ ಯಾತ್ರೆಗೈಯುವೆನ್ನಯ ಕವನ
ಬಯಲು ಸೀಮೆಯ ದೃಶ್ಯ ಕಾರ್ಪಣ್ಯತೆಗೆ ಬದಲು
ಮಲೆನಾಡಿನಡವಿ ಮೈಸಿರಿಯ ವಿನ್ಯಾಸಮಂ
ನೋಂತಿದೆ, ತೊರೆದು ನಪುಂಸಕರ ಸಂನ್ಯಾಸಮಂ!

೫-೯-೧೯೩೬