ದತ್ತುರಿಯ ಹೂವು, ತಾವರೆ, ಕಿತ್ತಿಳೆಯ ಹಣ್ಣು,
ಕೇಸರಿ, ಗುಲಾಬಿ, ಕುಂಕುಮರಂಗು – ತರತರದ
ಫಲಕುಸುಮ ಸಮ ರತ್ನರಾಗ ಸುಮನೋಹರದ
ಭೋಗಮಂದಾಕಿನಿಯ ಪ್ರವಹಿಸುತೆ ಉಷೆವೆಣ್ಣು
ಮೂಡುತಿಹಳದೊ ದೂರ ದಂತುರ ದಿಗಂಗದಲಿ,
ಪ್ರತಿಭಾತಟಿತ್ತಿನಿಂ ಮನವನುಜ್ವಲಗೈದು,
ಸೌಂದರ್ಯ ನಂದನವನಾತ್ಮ ನಾಕಕೆ ನೆಯ್ದು,
ಗಿರಿವನ ತರಂಗಮಯ ಸಹ್ಯಾದ್ರಿರಂಗದಲಿ!
ಹಬ್ಬಿಹುದರಳೆಮಂಜು ನೊರೆಯ ಹೆಗ್ಗಡಲಾಗಿ
ಬಿತ್ತರದ ಬಿಂಕದಿಂ ಕಂದರಂಗಳ ತುಂಬಿ,
ಸೃಷ್ಟಿಸುತೆ ಸಾಗರದ್ವೀಪ ಸಮ್ಮೋಹಮಂ.
ಭಾವಭಾಗೀರಥಿಯು ಧುಮುಕಿದೆ ನಭಶ್ಚುಂಬಿ
ಪ್ರಾಣಶೈಲಾಗ್ರದಿಂ ಪ್ರಾಸ ಘೋಷಿಣಿಯಾಗಿ
ಕೊಚ್ಚಿ ಕರಗಿಸಿ ದೇಹ ನಾನೆಂಬ ಗೇಹಮಂ!

೧೩-೪-೧೯೩೫