ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ
ನಡೆಯ ಮಡಿಯಲಿ, ನುಡಿಯ ಸವಿಯಲ್ಲಿ. ನಿಮ್ಮ ಬಗೆ
ಹಸುಳೆ ನಗೆ: ನಿಮ್ಮ ಕೆಳೆಯೊಲುಮೆ ಹಗೆತನಕೆ ಹಗೆ.
ಕಪ್ಪುರಕೆ ಕಿಡಿ ಮತ್ತೆ ಸತ್ಯಕ್ಕೆ ಸೌಂದರ್ಯ
ಸಂಗಮಿಸಿದಂತೆ, ರಂಜಿಸಿದೆ ಜೀವನ ಸೂರ್ಯ
ನಿಮ್ಮದೆಮ್ಮಯ ನುಡಿಯ ಗುಡಿಗೆ, ಮಂಗಳ ಕಾನ್ತಿ
ಪರಿಮಳಂಗಳನಿತ್ತು. ನಿಮ್ಮ ಬಾಳಿನ ಶಾನ್ತಿ
ಮತ್ತೆ ರಸಕಾರ್ಯಗಳಿಗುಪಮೆ ವೀಣಾತೂರ್ಯ!
ಕಚ್ಚಿದರೆ ಕಬ್ಬಾಗಿ, ಹಿಂಡಿದರೆ ಜೇನಾಗಿ
ನಿಮ್ಮುತಮಿಕೆಯನೆ ಮೆರೆದಿರಯ್ಯ: ಚಪ್ಪಾಳೆ
ಮೂಗುದಾರವನಿಕ್ಕಿ ನಡೆಯಿಸಿದರದು ಬಾಳೆ
ಹಿರಿಯ ಸಿರಿ ಚೇತನಕೆ? ಕೀರ್ತಿಲೋಭಕೆ ಬಾಗಿ
ಬಾಳ್ಬಂಡಿ ನೊಗಕೆ ಹೆಗಲಿತ್ತವರು ನೀವಲ್ಲ;
ತೇರ್ಮಿಣಿಯನೆಳೆದಿರಲ್ಲದೆ ಮತ್ತೆ ಮಣಿದಿಲ್ಲ!

೧೩-೪-೧೯೩೮