ನಗರದೆದೆಬೇಸರಿನ ಬೊಬ್ಬೆಗಾಂ ಬೇಸತ್ತು
ಬಂದಿಹೆನು ನಿನ್ನೆದೆಗೆ, ಓ ಸಹ್ಯಾದ್ರಿ, ಹಸಿದ ಶಿಶು
ತಾಕೌಗೆ ಹುಡುಕಿ ಹರಿವಂತೆ. ಸಂತಸಗೊಳಿಸು,
ಸಂತವಿದು, ಶಾಂತಿಯ ಸುಧೆಯ ತಂಪನೊಸೆದಿತ್ತು.
ಅಲ್ಲಿ ಸುಡುಬಿಸಿಲೊಂದೆ ಅಲ್ಲ: ಪುಸ್ತಕ ವಿದ್ಯೆ
ಬೇರೆ ದಹಿಸಿದೆ ಮನಕೆ ಸಂದೇಹದುರಿಯಿಕ್ಕಿ!
ಇಲ್ಲಿ ತೊಡಕಿನ ಕಬ್ಬು ಸೊಬಗುಗಾಣಕೆ ಸಿಕ್ಕಿ
ಮಧುರ ರಸವುಕ್ಕಿ ಹರಿವುದು ಕಂದರದ ಮಧ್ಯೆ!
ಬುದ್ಧಿಗತಿ ಸಂದೇಹ; ಹೃದಯಕೊ ಅತಿಶ್ರದ್ಧೆ.-
“ಅತಿಯ ತೊರೆ, ಮಿತಿಯಿರಲಿ; ಬುದ್ಧಿಹೃದಯಕೆ ಮಧ್ಯೆ
ನಡೆ” ಎಂಬೆಯೇಂ? ನಡೆದು ಕಂದಕಕೆ ಬಿದ್ದಿದ್ದೆ,
ಶೂನ್ಯಕ್ಕೆ! ಆ ಶೂನ್ಯವಿಕ್ಷುರಸನದಿಯಾಗಿ,
ಬುದ್ಧಿಹೃದಯದ ಮಧ್ಯೆ ಸವಿಯ ಸೇತುವ ತೂಗಿ,
ಹರಿಯುತಿಹುದಿಂದು, ಅರಿವಿರವಿನೊಂದಿಂಪಾಗಿ!

೧೧-೩-೧೯೩೭