ಬೇಸರದ ಬಂದಿಳಿಕೆ ಮನದ ಮಾವಿನ ಮರಕೆ
ಹಿಡಿದದನು ತಿರುಗಿಸುವ ಮೊದಲೆ ಬೇವಿನತನಕೆ
ನಿನ್ನ ಜೀವವನು ದುಮುಕಿಸು ಜಗದ ಜೀವನಕೆ:
ತೊರೆಯಲ್ಲಿ ತೆರೆಯಾಗಿ ಹರಿಯಲದು ಸಾಗರಕೆ.
ಪಾಲ್ಗೊಂಡು ಬೇರೆ ನಿಲ್ಲುವ ನೀರ್ಗೆ ಪರಮಗತಿ
ಪಾಚಿ; ಹೊಳೆಗಿಳಿಯಲ್ಕೆ ತಾನೆ ಸಂಜೀವ ಸುಧೆ:
ಕೋಟಿ ವೀಚಿಗಳೊಡನೆ ಕುಣಿಯುವಾನಂದವಿದೆ;
ತನ್ನಲ್ಪ ಗಾನಕ್ಕೆ ಕಲ್ಲೋಲ ಸರ್ವರುತಿ
ಶ್ರುತಿಯಾಗುವೊಂದತುಲ ಸಂಘಕೃಪೆ. – ಜಡತನಂ
ಸ್ವಾರ್ಥದ ತಮೋನಿದ್ರೆ: ತಳ್ಳಿ ತೊರೆದೆದ್ದೇಳು.
ಜೀವೋತ್ಸವದ ತೇರ್ಗೆ ಗಾಲಿಯಾದೊಡೆ ಬಾಳು
ಸಾರ್ಥಕಂ, ಸುಂದರಂ, ಮಧುರ ಚಿರನೂತನಂ.
ನೀರಸತೆಗಿಂ ಪಾಪಮಿಲ್ಲ, ರಸಕೆಣೆಯಾಗಿ
ಪುಣ್ಯಮಿಲ್ಲೆನೆ – ಪೂರ್ಣಯೋಗಿಯೆ ಪರಮಭೋಗಿ!

೫-೯-೧೯೩೬