ಕಬ್ಬಿಗಗೆ ನಿನ್ನೆದೆಯೆ ಕಟ್ಟಕಡೆಯಾಶ್ರಮಂ,
ಮೇಣುತ್ತಮಾಶ್ರಯಂ. ಗಂಧ ಶೀತಲವಾರಿ
ಬೆಂದು ಬಂದೆನಗೆ ನೀಂ; ಮಿಕ್ಕುದೆಲ್ಲಂ ದಾರಿ,
ಮನೆಯಲ್ತು. ಸಾಲ್ಗುಮಿನ್ನೆನಗಾ ವೃಥಾ ಶ್ರಮಂ
ಮನಸಿನಾ ವ್ಯರ್ಥ ವಿಚಿಕಿತ್ಸೆ! ವಿಜ್ಞಾನಕ್ಕೆ
ತತ್ವಕ್ಕೆ ಕಾವ್ಯಕ್ಕೆ ಪ್ರಕೃತಿ ಸೌಂದರ್ಯಕ್ಕೆ
ಭೋಗಕ್ಕೆ ತ್ಯಾಗಕ್ಕೆ ಮೇಣ್ ಬ್ರಹ್ಮಚರ್ಯಕ್ಕೆ
ಪ್ರೇರಕಂ ಪರಮಗತಿ ಸರ್ವಮುಂ ನೀನಕ್ಕೆ!
ಪ್ರೇಮಾವತಾರಿಣಿಯೆ, ಓ ನನ್ನ ಹೇಮಾಕ್ಷಿ,
ನಿನ್ನಪ್ಪುಗೆಯೆ ನನಗೆ ಸತ್ಯಸ್ಯ ಸತ್ಯಮಂ
ತೋರ್ಪುದಾನಂದಮಂ, ಮಿಕ್ಕೆಲ್ಲ ಮಿಥ್ಯಮಂ.
ವಿಸ್ಮೃತಿಯೊಳದ್ದಿಲ್ಲಗೈದು! ಪ್ರೇಮವೆ ಸಾಕ್ಷಿ
ಪರಮಾತ್ಮನಿರವಿಂಗೆ ಮೇಣವನನುಭವಕ್ಕೆ:
ನನ್ನ ಸಾಧನೆಯನಿತು ನಿನ್ನ ನೈವೇದ್ಯಕ್ಕೆ!

೩೧-೭-೧೯೩೬