ಪ್ರಾಚೀ ದಿಗಂಗನೆಯ ಸುಂದರ ಲಲಾಟದಲಿ
ಹೂನ್ನಿನುರಿಯನು ಕಡೆದು ಸಿಂಗರಿಸಿದಂತೆ ರವಿ
ಮೆಲ್ಲಮೆಲ್ಲನೆ ಕಣ್ಗೆ ರಂಗೆರಚಿ ಮೆರೆಯೆ, ಕವಿ
ಭಾವಲಯನಾಗಿ ನಿಂತೆಡೆಯೊಳೆ ವಿರಾಟದಲಿ
ಸಂಚರಿಸೆ – ನರಕ ನಡುಗುತಿದೆ ಅದೊ ನೋಡಲ್ಲಿ!
ಸಗ್ಗ ನಾಚುತಿದೆ! ಯಮರಾಜನಸು ಕುಗ್ಗುತಿದೆ
ಕೊರಲಿನಲಿ ಮಿಡುಕಿ! ಮುಕ್ತಿಯ ಹೃದಯ ಹಿಗ್ಗುತಿದೆ!
ನಾನು ಬಾನಾಗುತಿದೆ! – ಪೋ! ಮಾಯೆಯಿನ್ನೆಲ್ಲಿ?
ಸೌಂದರ್ಯ ಸಾಧನೆಯ ಸುಂದರ ತಪಸ್ಸಿನಲಿ
ಕೇಡುಕತ್ತಲೆಯೆಲ್ಲ ನೇಸರೇಳ್ಗೆಯ ಮುಂದೆ
ಮಂಜು ಹಿಂಜರಿವಂತೆ ಸಾಯುತಿದೆ! ಕವಿಯೊಂದೆ
ಮುಂಗುರುಳಿನುಂಗುರದಿ ವಿಶ್ವವೆಲ್ಲವು ಸಿಕ್ಕಿ
ತೂಗುತುಯ್ಯಲೆಯಾಡುತಿದೆ! ಭಾವನದಿಯುಕ್ಕಿ
ಲಗ್ನವಾಗಿದೆ ಮಾನಸ ಮಹಾ ಸರಸ್ಸಿನಲಿ!

೧೭-೩-೧೯೩೨