ಕರುಬುವಿಂದ್ರನನುಳುಹೆ ಹರಿಯು ವಾಮನನಾಗಿ

ಮೂರಡಿ ನೆಲನ ಬೇಡೆ ಧಾರೆಯೆರೆದೊಲಿದಿತ್ತೆ;
ಕೈತವದೊಳವನೋ ತ್ರಿವಿಕ್ರಮನೆ ತಾನಾಗಿ
ಸರ್ವಸ್ವವನು ಸುಲಿದು ಪಾತಾಳದಡಿಗೊತ್ತೆ,
ದೇವನನ್ಯಾಯವನು, ಹೇ ಮಹೋದಾರ ಬಲಿ,
ಕೃಪೆಯೆಂದು ಸಹಿಸಿದಾತನು ನೀನಸುರನಲ್ಲ!
ದೇವತೆಗಳಾಚರಿಸೆ ರಾಕ್ಷಸರ ರೀತಿಯಲಿ
ದೇವತ್ವವನು ಹೊರೆದ ನೀಂ ದೇವನೆಮಗೆಲ್ಲ!
ಹರಿ ತುಳಿದರೇನಂದು? ನರನು ಪೂಜಿಪನಿಂದು!
ಹೆರರ ಮೇಲ್ಮೆಗೆ ಕರುಬಿ ಕುದಿದಿಂದ್ರನಿಂದೆಲ್ಲಿ?
ಪೂಜಿಸುವರಾರಾತನನು? ಪಾಳ್ಗುಡಿಯ ಹೋಲಿ
ಹೂವು ಗಂಟೆಗಳಿಲ್ಲದಾಗಿಹನು; ಎಂದೆಂದು
ನರರ ವಿಸ್ಮೃತಿಯ ಪಾತಾಳದಂಧತೆಯಲ್ಲಿ
ಬಿದ್ದಿಹನು: ಅಃ ದೇವನೆಂತೂ ಕೃಪಾಶಾಲಿ!

೮-೧೧-೧೯೩೪