ವಿಕಸಿತ ಸಹಸ್ರದಲ ಪದ್ಮಪೀಠದ ಮೇಲೆ

ಮಂಡಿಸಿಹ ಧವಲಿಮಾ ಧ್ಯಾನಸ್ತಿಮಿತಮೂರ್ತಿ,
ಹೇ ಬುದ್ಧದೇವ, ನಿನ್ನತುಲ ಬುದ್ಧಿಸ್ಫೂರ್ತಿ
ಮಾನವನ ಮೂರ್ಖತೆಯ ದಹಿಸುವ ಮಹಾಜ್ವಾಲೆ.
ಅರ್ಥವಿಲ್ಲದ ಕರ್ಮತತಿಯ ಮರುರಂಗದಲಿ
ಶುಷ್ಕ ಆಚಾರಸೈಕತದಲ್ಲಿ ನಡೆಗೆಟ್ಟು
ನಿರ್ಮಲ ವಿಚಾರನದಿ ಲಯವಾಗುತಿರೆ; ಕಟ್ಟು
ಕಟ್ಟಳೆಯ ಲೌಹ ಶೃಂಖಲೆಯ ಯಮಸಂಗದಲಿ
ಕುಬ್ಜವಾಗುತಲಿರಲು ಧರ್ಮದ ಮಹೋನ್ನತಿಯು,
ವೈರಾಗ್ಯವರ್ಷವನು ಕರೆದು, ಜನರಲಿ ಮತಿಯು
ಶ್ರುತಿಯ ಬಂಡೆಯ ಬಿರಿದು ಮೂಡುವಂತೆಸಗಿರುವೆ!
ಹೇ ಪುಣ್ಯಮತಿಮೂರ್ತಿ, ಮತದ ಮತಿಹೀನತೆಯು
ಸಾಕೆಮಗೆ; ಬೇಕು ಸನ್ಮತಿಯ ನಾಗರಿಕತೆಯು:
ನರನ ಸನ್ಮತಿಗಿಂತ ಬೇರೆಯ ಜಗದ್ಗುರುವೆ?

೪-೫-೧೯೩೨