ಊರಿನ ಕೊಳೆಯನೆಲ್ಲ ತೊಳೆವ ನಿನಗೆಯೆ ತೊಳೆಯೆ
ನೀರಿಲ್ಲ, ಓ ತೋಟಿ! ಹಣವಂತರಿಗೆ ತೊಟ್ಟಿ
ಮನೆಗಳನು ಕಟ್ಟುವ ನಿನಗೆ ಮಲಗೆ ಬಡಹಟ್ಟಿ
ಗತಿಯಿಲ್ಲ, ಓ ಕೂಲಿಗಾರ! ಪೈರನು ಬೆಳೆಯೆ
ನೀನು, ಲೋಕಕೆ ಕೂಳು; ಆದರುಣ್ಣಲು ನಿನಗೆ
ಕಾಳಿಲ್ಲ, ಓ ರೈತ! ತಿಂದು ಧನಿಕರ ಬುತ್ತಿ
ತೇಗುತಿದೆ; ಬಡಜನರೊ ಹೊಟ್ಟೆ ಬೆನ್ನಿಗೆ ಹತ್ತಿ
ನರಳಿ ಹೊರಳುತ್ತುರುಳುತಿರುವರು ಜವನ ಮನೆಗೆ.
ಕೈಗೆ ಕೈದುಗಳಿಲ್ಲ; ಬಾಯ್ಗೆ ವಾಗ್ಮಿತೆಯಿಲ್ಲ;
ಮೈಲಿ ರಕ್ತದ ಬಿಂದುವಿಲ್ಲ. ರಾಜ್ಯದ ಭಾರ
ನಿಮ್ಮ ಮೂಳೆಯ ಮೇಲೆ; ರಾಜ್ಯಭಾರದ ಸೂತ್ರ
ಪಾತ್ರ ನಿಮಗಿಲ್ಲ. ಶ್ರೀಮಂತ ಬೆಕ್ಕುಗಳೆಲ್ಲ
ಸಭೆಸೇರ್ದರಾದಂತೆ ಬಡ ಇಲಿಗಳುದ್ಧಾರ?
ಕೊಬ್ಬಿದರು ಕುರಿಗಲ್ಲ ಹಬ್ಬ; ಕುರುಬಗೆ ಮಾತ್ರ!

೨೯-೧-೧೯೩೫