ನಿನ್ನ ಸುಲಿಗೆಯ ಕತೆಯನೋದುತಿರೆಯಿರೆ ಕಣ್ಣು

ಹನಿ ತುಂಬಿ ಮಂಜಾಗುವುದು; ದೈನ್ಯದಲಿ ನೊಂದು
ನರಳುವುದು ಬಗೆ; ಕುದಿಯುವುದು ನೆತ್ತರದೆ ಬೆಂದು
ಬಿಸುಸುಯ್ಯುವುದು; ಕೋಪದುದ್ರೇಕದಲಿ ಮಣ್ಣು
ಗೂಡುತೆ ಮನಶ್ಯಾಂತಿ, ಸೈರಣೆ ಸಮತೆಗೆಟ್ಟು,
ನೂರಾರು ವಿಷಸರ್ಪಗಳು ಎದೆಯ ಹುತ್ತದಲಿ
ಹೆಡೆಯೆತ್ತಿ ನಿಲ್ಲುವುವು ಬುಸುಗುಡುತೆ! ಚಿತ್ತದಲಿ
ವಿಪ್ಲವದ ನಿಲಯಕ್ಕೆ ಹಗೆತನದ ನೆಲಗಟ್ಟು
ಮೂಡುವುದು! ಹಸಿದ ಹೆಬ್ಬುಲಿಯಂತೆ ನಾಳದಲಿ
ನೆತ್ತರೌಡನು ಕಚ್ಚುವುದು! ವಿಲಯ ಕಾಲದಲಿ
ದಳ್ಳುರಿ ನಗೆಯುವಂತೆ ಹೊಟ್ಟೆಯ ಸಿಡಿಲ್‌ಸಿಟ್ಟು
ಬೆಂಕಿವೆಟ್ಟಾಗುತ್ತೆ ಹಗೆಯ ನುಣ್ಣನೆ ಸುಟ್ಟು
ನೊಣೆಯಲುರಿ ಕಾರುವುದು! – ಮನ್ನಿಸಮ್ಮಾ; ಸಿಲ್ಕಿ
ಮಮತೆಯಲಿ ಒಮ್ಮೊಮ್ಮೆ ಕವಿಯಾಗುವನು ಕಲ್ಕಿ!

೨೦-೩-೧೯೩೧

 
* ವಿಲ್ ಡ್ಯೂರಾಂಟ್ ಅವರ ‘ದಿ ಕೇಸ್ ಫಾರ್ ಇಂಡಿಯಾ’ ಓದಿ.