ವೇದಋಷಿಭೂಮಿಯಲಿ ನಾಕನರಕಗಳಿಂದು

ಸಾವು ಬದುಕಿನ ಕಟ್ಟಕಡೆಯ ಹೋರಾಟದಲಿ
ಸಂಧಿಸಿವೆ. ಮಾನವನೆದೆಯ ಕಾಳಕೂಟದಲಿ
ಅಮೃತವನೆ ಹಾರೈಸಿ ಬಲಿರಕ್ತದಲಿ ಮಿಂದು
ಕಾದಿಹೆವು ಕಣ್ಣೀರು ತುಂಬಿ. ನಾಗಿರಕತೆಯ
ನಾಗಿನಿಯು ಪ್ರಗತಿನಾಮಕ ಫಣೆಯ ಮೇಲೆತ್ತಿ
ಚುಂಬಿಸಿಯೆ ಕೊಲ್ಲಲೆಳಸುತಿದೆ. – ಹಿಂದಿನ ಬುತ್ತಿ
ಸಮೆಯುತಿದೆ. ಇಂದಿನ ಮಹಾತಪಸ್ಸಿನ ಚಿತೆಯ
ರಕ್ತಿಮ ವಿಭೂತಿಯೊಳೆ ಮುಂದಿನ ನವೋದಯದ
ಧವಳಿಮ ಪಿನಾಕಧರನೈತಹನು: ಮತ್ತೊಮ್ಮೆ
ಭಾರತಾಂಬೆಯು ಜಗದ ಬೆಳಕಾಗುವಳು; ಹೆಮ್ಮೆ
ಗೌರವಗಳಿಂದ ಜನಗಣದ ಕಟು ನಿರ್ದಯದ
ಲೋಭಬುದ್ಧಿಯ ಹೀನ ಕುಟಿಲತೆಯನುರೆ ನೀಗಿ
ಮೆರೆವಳು ತಪಸ್ವಿನಿಯೆ ಚಕ್ರವರ್ತಿನಿಯಾಗಿ!

೧೦-೩-೧೯೩೨