ನಿನಗೆ ನಾನಾವ ಸನ್ಮಾನವನು ಕೊಡಬಲ್ಲೆ,
ಓ ಕಲಿಯೆ? ಭರತಖಂಡವೆ ಮರುಗುತಿದೆ ನಿನಗೆ.
ನೋಡು ಅದೊ, ನಮ್ಮ ತಾಯಿಯ ಮೊಗದ ಮೂಡುನಗೆ
ಬಾಡುತಿದೆ ದುಗುಡದಲಿ! ನಿನ್ನ ಚಿತೆಯೆಡೆಯಲ್ಲೆ
ಲೋಕದ ಮಹಾತ್ಮನೆದೆ (ಮರುಕದೊಳೆ ನಾಂ ಬಲ್ಲೆ!)
ಕೆಚ್ಚುನುಡಿಯಾಡುತಿದೆ ಹಗೆ ನಡುಗಲಾ ದನಿಗೆ!
“ನೆಚ್ಚುಗೆಡದಿರಿ, ಯಜ್ಞವಿದು! ಬಿಡುಗಡೆಯ ಮನೆಗೆ
ಬಾಗಿಲಿಹುದಿಂತಹ ಹುತಾತ್ಮರ ಮಸಣದಲ್ಲೆ!”
ಪಂಜರದೊಳಿದ್ದರೂ ಸಿಂಹದಂತೆಯೆ ಬಾಳಿ
ಗರ್ಜಿಸುತೆ ತೆರಳಿದೈ! ನಿನ್ನ ಆ ಬಲ್ಮೆಯುಲಿ
ನಮ್ಮನೂ ಕಲಿಮಾಡಿಹುದು. ಸೆರೆಮನೆಯ ಸೀಳಿ
ಮುಕ್ತಾತ್ಮನಾಗಿರುವೆ ಮುಳುಗಿ ಚಿರಮುಕ್ತಿಯಲಿ!
ಮತಿಲಾಲ, ನಿನ್ನ ದಹಿಸಿದ ಸೂಡಿನುರಿಗಾಳಿ
ತಗುಲಿಹುದು ಸೆರೆಮನೆಗೆ! ನೋಡದಕೆ ಹಗೆಯೆ ಬಲಿ!

೯-೩-೧೯೩೧