ಇತರರೆನ್ನನು ಹೊಗಳುವರು ಎಂದು ನೀನೇಕೆ
ಹೊಗಳುತಿಹೆ? ಇತರರೇನನು ಕೊಡರು. ಅದಕಾಗಿ
ಹೊಗಳಿಕೆಯ (ನುಡಿಯ ಕೊಡುಗೆಯ) ಕೊಡುತಿಹರು. ಕೂಗಿ
ಮಾತೆ ಹೊಗಳುವುದಿಲ್ಲ; ಮುದ್ದಿಸೊಲಿಯುವಳಾಕೆ
ಕಂದನನು. ತುಟಿಯ ಬರಿ ಬಯಲು ಹೊಗಳಿಕೆ ಸಾಕೆ
ನಿನ್ನ ಕವಿಶಿಶುಗೆ? ಜನರೀವ ಕೀರ್ತಿಯು, ತೂಗಿ
ನೋಡಿದರೆ, ನಿನ್ನೊಲ್ಮೆಯಿದಿರಿನಲಿ ಜಳ್ಳಾಗಿ
ತೂರುವುದು. ಒಲ್ಮೆಯಿರೆ ಹೆಸರ ಹೆಮ್ಮೆಯು ಬೇಕೆ?
ತಾಯಿಯಾಗಿರು, ಸಾಕು; ನಾನು ಹಸುಳೆಯು ನಿನಗೆ.
ಜನರ ಹೊಗಳಿಕೆಯಿಂದ ತಲೆ ತುಂಬುವುದು ಹೆಮ್ಮೆ.
ನಿನ್ನೊಲ್ಮೆಯಾದರೋ ನನ್ನ ಹೃದಯವ ತುಂಬಿ
ಸಂತೈಸಿ ಸಲಹುವುದು. ಜನರ ಮಾತನು ತುಂಬಿ,
ಪ್ರೀತಿಸದೆ ಕೊಡುವವರ ಕೀರ್ತಿಯ ಸವಿಯಲಮ್ಮೆ.
ಹೆಸರಿಗಿಂತಲು ಹಿರಿದು ತಾಯಿಯೊಲ್ಮೆಯು ನನಗೆ.

೧೭-೩-೧೯೩೧