ಈ ಮಹಾ ಸ್ವಾತಂತ್ರ್ಯರಣಯಾಗ ಧೂಮದಲಿ
ಶ್ವೇತಾಗ್ನಿ ಜ್ವಾಲೆಯೊಂದುರಿಯುತಿದೆ; ನಿಶ್ಚಲಂ
ರಂಜಿಸುತ್ತಿದೆ – ಶಾಂತಿಯಲಿ ಹಿಮಮಹಾಚಲಂ
ರಾರಾಜಿಪಂತೆ ನೀಲಿದು ನಭೋಧಾಮದಲಿ.
ಲೋಕಲೋಚನದಂತರಾಳದಾರಾಮದಲಿ
ವಿಶ್ವಕಂಪನಕಾರಿಯಾದ ಧರ್ಮದ ಬಲಂ
ಮೂರ್ತಿಗೊಳೆ ಮೂಡಿದೀತನು ಮಹಾತ್ಮನೆ ವಲಂ:
ಬಾಳು ಪಾವನಮಾದುದೀತನಿಂ ಭೂಮಿಯಲಿ!
ಓ ಮಹಾತ್ಮನೆ, ನಿನ್ನ ಸಾನ್ನಿಧ್ಯತೀರ್ಥದಲಿ
ಮಾನವನ ಮೋಹಮದಮಾತ್ಸರ್ಯಗಳು ಮಿಂದು
ಪ್ರೇಮದಿ ಪುನೀತವಾಗಿಹವು! ಸುಮುಹೂರ್ತದಲಿ
ಭಾರತಾಂಬೆಯ ಸಿರಿವಸಿರಿನಿಂದಲೈತಂದು
ಧರ್ಮದಲಿ ನೆಚ್ಚುಗೆಡುತಿದ್ದೆಮಗೆ ನೀನಿತ್ತೆ,
ಪ್ರಚ್ಛನ್ನ ಕಲ್ಕಿಯೇ, ದೃಢಭಕ್ತಿಯನು ಮತ್ತೆ!

೧೧-೩-೧೯೩೧