ಕಲ್ಲು ಕೋಂಟೆಯ ಸೆರೆಯು ಸೆರೆಯಲ್ಲ; ಬಗೆಸೆರೆಯ
ಭೀಷಣ ಬಲಿಷ್ಠ ತೆಗುಪಮೆಯಿಲ್ಲ. ಕಬ್ಬುನದ
ಸಂಕೋಲೆಗಿಂ ಚಿರಂ, ಕ್ರೂರಕಠಿನಂ, ಮನದ
ಮೂಢತೆಯ ಕಪಿಮುಷ್ಟಿ. ಧನಿಕತೆ ಮತದ ಮರೆಯ
ತನುತರ ನಿಗಳದಿಂದೆ ಮಂದಿಯಂ ಬಂಧಿಸಿದೆ;
ಪರಸುಖಂ ನಿಮಗೆನುತ್ತಿಹದೊಳವರನು ಹೀರಿ
ಸಾಮ್ರಾಜ್ಯವಾಳುತಿದೆ, ಸವಿ ಹೊಂಗನಸು ತೋರಿ.
ತನ್ನ ಸುಳ್ಳಿಗೆ ತಾನೆ ಗುಡಿ ಕಟ್ಟಿ ವಂದಿಸಿದೆ!
ಮಾದೇಶ್ವರನ ಬೆಟ್ಟಕಂತೆ, ಅದೊ ನೋಡಲ್ಲಿ,
ನಡುಹಗಲಿನುರಿಬಿಸಿಲಿನಲಿ ಕೂಗಿಕೊಳ್ಳುತ್ತೆ
ಬಿಡುಮುಡಿಯ ಪರಿದುಡೆಯ ಹೊಟ್ಟೆಗಿಲ್ಲದ ಹಳ್ಳಿ
ಹೋಗುತಿದೆ! ಕೂಸುಗಳೊ ಬಿರುಸೆಕೆಗೆ ಸೀಯುತ್ತೆ
ತಾಯ್ಗಳೆದೆಗೊರಲುತಿವೆ! – ಮೌಢ್ಯಕಿಂ ಪೋಲೀಸೆ?
ಕರ್ಬೊನ್ನ ಸರಪಣಿಯು ಮತದಫೀಮಿಗೆ ಲೇಸೆ?

೪-೧೧-೧೯೩೫