ಮರುಭೂಮಿ ಮಾರ್ಗದಲಿ, ವೈರಾಗ್ಯ ಸಾಧನದಿ
ಮುಕ್ತಿ? – ನಾನದನೊಲ್ಲೆ. ಅದು ನನ್ನ ಪಥವಲ್ಲ;
ರಸ ತಪಸ್ಸಿನ ಕವಿಯ ದರ್ಶನದ ಮತವಲ್ಲ.
ಸೌಂದರ್ಯ ಮಾಧುರ್ಯ ಸಮ್ಮೋಹ ನಂದನದಿ,
ಮಾಯಾ ಜಗತ್ತಿನ ಸಹಸ್ರಾರು ಬಂಧನದಿ,
ಮಳೆಬಿಲ್ಲಿನಲಿ ಬಣ್ಣಗಳು ರಮಿಸುವಂದದಿಂ,
ನಲಿಯುವೆನು ಹಾಸುಹೊಕ್ಕಾಗಿ. ಆನಂದದಿಂ
ಬಂಧನದ ನಾಡಿಯಲಿ ಹರಿಯುತಿದೆ ಮುಕ್ತಿನದಿ.
ತ್ಯಾಗ ತಾನೊಂದು ಕೈ, ಭೋಗ ತಾನೊಂದು ಕೈ;
ಯೋಗಿಕವಿ ಪರಿಯೆ ರಾಗಾಲಿಂಗನಕೆ ನೀಡಿ,
ಥಕ್ಕಥೈ ಎಂದು ಕುಣಿದೈತಹುದೊ ಮುಕ್ತಿಮೈ,
ಮೈ ಮೈಯ ಕೈ ಕೈಯನಪ್ಪಿ ಚುಂಬನಗೂಡಿ.
ನಿನಗೆ ಮಾಯಾ ಮೋಹದಂತೆಸೆವ ಪ್ರೇಯಸ್ಸು
ನನಗೆ ತಾನಹುದು ಮುಕ್ತಿಯ ಪರಮ ಶ್ರೇಯಸ್ಸು!

೧೨-೧-೧೯೩೪