ಪ್ರಕೃತಿ ಕಲೆಗಿಂ ಮಿಗಿಲೆ ನರಕೃತಿಯ ಕಲೆ? ನೋಡ,
ಆಶ್ವೀಜದಾಕಾಶದಮೃತ ಚಿತ್ರದ ಶಾಲೆ
ಸೃಷ್ಟಿ ಶಿಲ್ಪಿಯ ಹೃದಯಪಿಂಡ ಕುಂಡ ಜ್ವಾಲೆ
ಕಡೆದಿಟ್ಟ ಕೃತಿಗಳಿಂ ಭೀಮರಮ್ಯಂ! ಮೋಡ
ಅರಳೆರಾಸಿಗಳಂತೆ, ಬೆಣ್ಣೆ ಬಂಡೆಗಳಂತೆ,
ಫೇನ ಮೃದು ರಜತಗಿರಿ ಶಿಖರ ಪದ್ಮಗಳಂತೆ,
ಕಡೆದ ಹಾಲ್ಗಡಲೆದ್ದು ಸಾಲ್ಗೊಂಡಲೆಗಳಂತೆ
ಶೋಭಿಸಿವೆ, ಶರದಭ್ರ ಶುಭ್ರಚಿಂತೆಗಳಂತೆ!
ಆವ ಕವಿಗಾವ ಶಿಲ್ಪಿಯ ಕೌಶಲಕೆ ಸಾಧ್ಯ
ಈ ಬೃಹತ್, ಈ ಮಹತ್, ಈ ರೂಪವೈವಿಧ್ಯ?
ಬರಿಯ ಮೋಡಗಳಲ್ಲ ಇವು ಬಿಳಿಯ ಆತ್ಮಗಳ್,
ಕ್ರಿಸ್ತ ಬುದ್ಧರ ಪೋಲ್ವ ವಿಶ್ವದ ಮಹಾತ್ಮಗಳ್:
ಹಿಂದೆ ಬಂದುವೊ ಮುಂದೆ ಬರಲಿಹವೊ ಪ್ರಾಣಗಳ್,
ಧ್ಯಾನಗಳ್, ಭಾವಗಳ್, ಲೋಕ ಕಲ್ಯಾಣಗಳ್!

೨೩-೯-೧೯೪೧