ವ್ಯೋಮ ಗೋಪುರ ಶಿಖರದಿಂದಿಳಿದು ಬಾ, ಹೇ ಅಮೃತೆ,
ಮಣೆದೆನ್ನ ಮುಡಿಗುಡಿಗೆ: ಶಿವೆ ನೀಂ ತಪೋರೂಪಿಣಿ;
ಚಿರಧವಳೆ; ಪುಣ್ಯಮಯಿ; ಲಜ್ಜಾಕರೆ; ಋತಾನ್ವಿತೆ;
ಭಗವದಾಶೀರ್ವಾದ ಮೇಣ್ ಕೃಪಾ ಸ್ವರೂಪಿಣಿ!
ನಾನಳಿವ ದಾರಿಯದೆ ನೀನಿಳಿಯುತೈತಹ ಪಥಂ:
ಮರ್ತ್ಯಜಂ ಕೀರ್ತಿಶನಿ ಅಹಂಕಾರ ಖನಿಯಲ್ತೆ?
ಜನ್ಮಜನ್ಮಕ್ಕೆನಗೆ ನೀಂ ಮೋಕ್ಷಯಾತ್ರಾ ರಥಂ,
ಸ್ಪರ್ಧಾದೂರೆ, ಮತ್ಸರ ವಿದೂರೆ, ಹೇ ಅಮರ್ತ್ಯೆ!
ವಿಪಿನ ಚಂದ್ರಿಕೆಯಂತೆ ಶಾಂತೆ, ನೀರವೆ, ಧನ್ಯೆ,
ಪರಾಭಕ್ತಿಯುದ್ದೀಪನವೆ ತವಾಗ್ನಿಪದ ಚಿಹ್ನೆ!
ಕ್ಷೀರ ವಾರಾಶಿಯೋಲ್ ಕಾಲಲೀಲಾ ಕ್ಷುಬ್ಧೆ
ನೀಂ ನಿತ್ಯಮಕ್ಷುಬ್ಧೆ; ಮೇಣ್ ಗರ್ವವರಿಯದ ಮುಗ್ಧೆ
ಸುವಿದಗ್ಧೆಯಾದೊಡಂ:-ಹೇ ಅಸಂಖ್ಯ ಹೃತ್‌ಸಂಗಿನಿ
ಕವಿಯಶೋಲಕ್ಷ್ಮಿ, ನೀನನವರತಮೇಕಾಂಗಿನಿ!

೨೧-೮-೧೯೪೬