ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ!
ಎಲ್ಲಿದ್ದರೇನಂತೆ, ನಿನ್ನನೊಲಿಯದೆ ಮಾಣೆ,
ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!
ವಿಶ್ವಜೀವನವೊಂದು ಪಾರವಿಲ್ಲದ ಸಿಂಧು:
ಮೇಲೆ ತೆರೆ ನೊರೆಯೆದ್ದು ಭೋರ್ಗರೆಯುತಿರೆ ರೇಗಿ,
ಅದರಂತರಾಳದಲಿ ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿವೆ ಪ್ರೇಮತೀರ್ಥದಿ ಮಿಂದು!
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ;
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?
ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ?
ಹಾದಿ ಸಾಗಿದರಾಯ್ತು! ಬರುವುದೆಲ್ಲಾ ಬರಲಿ!
ಬಾರಯ್ಯ, ಮಮ ಬಂಧು, ಜೀವನಪಥದೊಳಾವು
ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು!

೭-೧-೧೯೩೩