ನಾ ಬಲ್ಲೆ: ನಕ್ಷತ್ರಗಳು ನೋಡುತಿವೆ; ಸೃಷ್ಟಿ
ಉತ್ಕಂಠಭಾವದಿ ನಿರೀಕ್ಷಿಸುತ್ತಿದೆ; ಧರಣಿ
ಕಾದಿಹಳು ಕಾತರದಿ; ಸಂತೋಷದಲಿ ತರಣಿ
ಕಾಣುತಿಹನೆವೆಯಿಕ್ಕದೆಯೆ; ಜಗತ್ತಿನ ದೃಷ್ಟಿ
ರಮಿಸುತಿದೆ ನಿನ್ನನ್, ಓ ಎನ್ನ ಕಬ್ಬದ ನಲ್ಲೆ!
ಹೂ ಬಳ್ಳಿ ಗಿಡುಮರಂ ಮಲೆ ಹೊಳೆ ಬನಂ ಬಾನು
ಸರ್ವವೂ ಸವಿಯುತಿವೆ, ಭೋಗಿಸುತ್ತಿವೆ, ನಾನು
ಗೈಯುವ ಕಲಾಕರ್ಮಮಂ! ಬಲ್ಲೆ, ನಾ ಬಲ್ಲೆ!
ಮನುಜನೊಬ್ಬನೆಯಲ್ತು ನಲಿವವನು ಮನಗಂಡು
ನನ್ನ ಕಲೆಯಂದಮಂ: ಗಾನಗೈವಾ ಖಗಂ,
ಮಿರುಗುವಾ ತೃಣದ ಹಿಮಮಣಿ, ಮೇಯುವಾ ಮಿಗಂ
ಸುಖಿಸುತಿಹವದನು ಸಂತಸದಿ ಸವಿಸವಿದುಂಡು!
ಮನುಜ ಕೃಪಣತೆ ದಾನವೀವ ಕೀರ್ತಿಯು ಬೇಕೆ
ಮಮಕಾವ್ಯಕನ್ನಿಕೆಗೆ? ರಸವಿರಲು ಜಸವೇಕೆ?

೧೦-೮-೧೯೩೪