ಸೋತೆನ್; ಎನ್ನಿಂದಾಗದಿನ್ ಮೇಲೆ; ಗುರುದೇವ,
ಮನ್ನಿಸೆನ್ನನ್, ಹಿಂದೆ ಹೇಳ್ದನಲ್ಲವೆ ಯೇಸು:
“ಕುದಿಯುವುದಕಿಂತಲೂ ಮದುವೆಯಪ್ಪುದೆ ಲೇಸು.”
ಸಂಯಮದ ಹೆಮ್ಮೆಯಾ ಸಗ್ಗದಾಸೆಗೆ ನೋವ
ನರಕದಿ ತಪಂಗೈದೆನಿದುವರೆಗದುವೆ ಸಾಕು.
ಎನ್ನಹಂಕೃತಿ ಬೆಳೆಗೆ ಹೆರರ ಮೆಚ್ಚುಗೆ ಬೇಲಿ,
ನಿಂದೆಯೆಂಬುದೆ ಪಹರೆ. ಅಯ್ಯೊ, ಸೆರೆಯನೆ ಹೋಲಿ
ಬಾಳ್ದ ಬದುಕಿದು ಸಾಕು. ಇನ್ನು ಬಿಡುಗಡೆ ಬೇಕು,
ಬಿಡುಗಡೆಯು ಬೇಕೆಂಬ ಮೋಕ್ಷ ಬಂಧನದಿಂದ!
ಹೊನ್ನಾದರೇನು? ಕಬ್ಬಿಣವಾದರೇನು? ಮಿಣಿ
ಎಂದಿಗೂ ಬಂಧನವೆ! ನೀತಿಫಣಿ ಗರುಡಮಣಿ
ತಾನಲ್ತೆ ಕವಿಯ ರಸಹೃದಯ? ಕೇಳ್ – ರಸವೊಂದೆ
ನಿಯತಿಕೃತ ನಿಯಮ ರಹಿತನ್ ಕವಿಯೆನಗೆ ನೀತಿ:
ಹ್ಲಾದವೆ ಪರಮಧರ್ಮವುಳಿದುದೆಲ್ಲಂ ಭೀತಿ!

೧೩-೧-೧೯೭೩