ಗಗನವನು ನೋಡು ಮೈ ನೀಲಿಗಟ್ಟುವವರೆಗೆ.
ಕಡಲನೀಕ್ಷಿಸು ವಾರಿರಾಶಿ ಧಮನಿಗಳಲ್ಲಿ
ಧುಮ್ಮಿಕ್ಕಿ ಮೊರೆವನ್ನೆಗಂ. ಕಟ್ಟಿರುಳಿನಲ್ಲಿ
ನೀನೆ ಕತ್ತಲೆಯಾಗಿ, ನಿನ್ನೊಳಗೆ ಮಿರುಮಿರುಗೆ
ಕೋಟಿ ಸಂಖ್ಯೆಯ ತಾರೆಯನ್ನೆಗಂ ಧ್ಯಾನಗೈ.
ಕೇಳು, ಸುಗ್ಗಿಯ ಹಕ್ಕಿ ಕರೆಯೆ ಸಗ್ಗವ ಕೂಗಿ,
ಮೆಯ್ಯ ನೆತ್ತರುಮೆಲ್ಲಮಿಂಚರದ ಹೊನಲಾಗಿ.
ಸರ್ವ ಸೃಷ್ಟಿಯನೊಂದೆ ಮುಕ್ಕುಳಲಿ ಪಾನಗೈ!
ವಿಶ್ವವಿದು ನಿನ್ನಾತ್ಮದಾ ಕಾಲದೇಶದಲಿ
ನಿನ್ನ ಮೈಯಾಗಲಿ:- ವಸುಂಧರೆ ಹೃದಯವಾಗಿ,
ವಿಸ್ತೃತ ಸಮುದ್ರಗಳೆ ಶ್ವಾಸಕೋಶಗಳಾಗಿ,
ತೇಲಲಿ ಜಗತ್ತು ರಸಸಿದ್ಧಿಯಾಕಾಶದಲಿ
ಒಂದು ಎರಡೆಂದೆಂಬ ಹುಸಿಯನೆಲ್ಲವ ಬಿಟ್ಟು:
ಉಳಿಯಲೆಂದೆಂದಿಗೂ ಮೂಕವಾಗಿಹ ಗುಟ್ಟು!

೧೫-೨-೧೯೩೬