ಸಂನ್ಯಾಸಿ, ಹೊರಗೆ ಬಾ; ವೈರಾಗ್ಯ ಸಾಧನೆಗೆ
ಭಂಗಬರದೈ! ದಿವ್ಯ ಭುವನ ಸೌಂದರ್ಯದಲಿ
ಪರಮ ಸತ್ಯದ ಮೂರ್ತಿ ತಾಂ ಕಲಾ ಕಾರ್ಯದಲಿ
ತಲ್ಲೀನನಾಗಿಹನು. ಭವ್ಯನಾರಾಧನೆಗೆ
ಗಗನ ರವಿ ಶಶಿ ತಾರೆ ಗಿರಿ ಸರಿದ್ವನಮಾಲೆ
ಭಕ್ತಿಯಿಂದೆತ್ತಿದಾರತಿಯ ಶುಭ ಕಾಂತಿಯಲಿ
ರಂಜಿಸುವುದೆದೆಯ ಗವಿ; ನಿಲ್ಲುವೈ ಶಾಂತಿಯಲಿ.
ಸೌಂದರ್ಯವಿದು ಸತ್ಯಸತ್ಯದ ಪರಮ ಲೀಲೆ!
ಪಕ್ಷಿ ಶತ ಶತ ಗೀತ ಮುಖರಿತ ವಸಂತದಲಿ
ತುಂಬುವುದು ಜಗವನಾ ವಿಶ್ವದ ಕವಿಯ ವಾಣಿ.
ಸೌಂದರ್ಯ ದರ್ಶನದಿ ಭಾವದಿನನಂತದಲಿ
ಧ್ಯಾನಲಯನಾಗದಿರೆ ಮುಕ್ತಿಯೆಲ್ಲೈ, ಪ್ರಾಣಿ?
ಕಲೆಯ ಮಿಂಚುಣದವಗೆ ಇಹ ಶೂನ್ಯ, ಪರಶೂನ್ಯ,
ರಸರೂಪಿ ಸರ್ವೇಶನಾಶೀರ್ವಚನ ಶೂನ್ಯ!

೨೨-೧೧-೧೯೩೧