ಹರಿಯುತಿಹುದಿರುಳ್ನಿದ್ದೆ ತಿರೆಯ ಮನದಿಂ, ತೇಲಿ
ಗಾಳಿಗುದುರುವ ಹಕ್ಕಿಗರಿಯಂತೆ. ಉಷೆವೆಣ್ಣು
ಮೂಡಣ ದಿಗಂತದೆವೆಯಂ ಬಿದಿರ್ಚುತೆ ಕಣ್ಣು
ತೆರೆದಿಹಳು. ಮುಸುಗಿಹುದು ಮೃದುಮನೋಹರನೀಲಿ
ಚಾಮುಂಡಿಯಂ: ಮಲಗಿದಂತಿದೆ ಮಹಾಕಾಲಿ
ವಿಶ್ರಾಂತಿಯಲಿ! ದಿನದಿಂದ ಪರಿಚಯದ ಮಣ್ಣು
ಸ್ವರ್ಗೀಯವಾಗಿಹುದು. ಮುಗಿಲ ಕಿತ್ತಿಳೆಹಣ್ಣು
ಮಾಗುತಿಹುದೊಯ್ಯಯ್ಯನುರಿಯ ಬಣ್ಣವ ಹೋಲಿ.
ರಾಜಧಾನಿಯ ಬಹುಮುಖದ ಬೃಹಜ್ಜೀವನಂ
ಮೆಲ್ಲ ಮೆಲ್ಲನೆಯೆ ಮೈಮುರಿಯುತಿದೆ, ಪವಮಾನ
ಕ್ಷುಬ್ಧವಾಗುವ ಸ್ತಬ್ಧ ಜಲಧಿ ಜೀವನದಂತೆ.
ಜಾಗರಿತವಾಗುತಿದೆ ನಗರದ ಮಹಾಮನಂ
ಹಗೆ ಒಲ್ಮೆ ಸಿರಿ ಬಿಜ್ಜೆ ಮಾನ ಮೇಣಪಮಾನ
ತಂತ್ರದಲಿ, ಜಟಿಲಜಾಲಂ ನೆಯ್ವ ಜೇಡನಂತೆ!

೨೫-೨-೧೯೩೪* ಒಂಟಿಕೊಪ್ಪಲಿನ ಜಲಾಶಯದಿಂದ ಫಾಲ್ಗುಣದ ಉಷಃಕಾಲದಲ್ಲಿ.