ಧಮನಿಯಲಿ ಬಿಸಿನೆತ್ತರುಕ್ಕದೆ ನೆನೆಯಲಾರ
ನಿನ್ನಂ, ಲೆನಿನ್! ನಿನ್ನ ಹೆಸರದು ಸಿಡಿಲ್‌ಸದ್ದು
ದೊರೆಗಿವಿಗೆ; ನಿನ್ನ ಸಮತಾಬೋಧೆ ಸಿಡಿಮದ್ದು
ನರನ ಸಂಗ್ರಹ ಬುದ್ಧಿ ಸ್ವಾರ್ಥತೆಯನುರಿದೋರೆ
ದಹಿಸಿ, ನಿಃಸ್ವಾರ್ಥತೆಯ ಬೆಂಕಿಯಿಂ ಹೃತ್ಕುಂಡ
ಸರ್ವದಾ ಪ್ರಜ್ವಲಿಸುವಂತೆಸಗೆ. ಜಮದಗ್ನಿ
ಸುತನಂತೆ ನೀನು ಪಾರ್ಥಿವ ಕುಲಕೆ ಬಡಬಾಗ್ನಿ:
ದುಡಿವ ದೀನರ ದೈವವನ್ಯರ್ಗೆ ಯಮದಂಡ!
ಗೆಯ್ಯುವರ್ಗೇನಿಲ್ಲ, ಕುಳಿತುಂಬರಿಗೆ ಬೆಲ್ಲ;
ಮುಳ್ಳುನೋವಾಳಿಂಗೆ, ಕಂಪು ಹೂವೊಡೆಯಂಗೆ;
ಗೋಳವಗೆ, ಸೊಂಪಿವಗೆ. ಈ ತರತಮವನೆಲ್ಲ
ಮುರಿಯೆ ಬಹನಲ್ಲಲ್ಲಿ ಕಲ್ಕಿ. ರಕ್ತದ ಗಂಗೆ
ಸಿರಿ ನಾಳದಿಂ ಮರಳಿ ಬಡತನದೊಣಗು ಮೈಗೆ
ಹರಿದಕ್ಕೆ ದೊರೆಗಳಸಿ ಕೂಲಿರೈತರ ಕೈಗೆ!

೨೫-೧-೧೯೩೫