ಆಂಗ್ಲ ಕವಿಗಳಲಿ ನೀನೆನ್ನೆದೆಯ ಸೆಳೆದಂತೆ
ಉಳಿದವರು ಸೆಳೆದಿಲ್ಲ, ನರನಾಟಕವ ನೋಡಿ
ರಂಗದಲಿ ಚಿತ್ರಿಸಿದ ಷೇಕ್ಸ್ಪಿಯರನುಂ ಕೂಡಿ.
ನೀನೊಂದು ಪರ್ಣಕುಟಿ; ಆತನೊ ಪಿರಿಯ ಸಂತೆ!
ಶಾಂತಿಯಲಿ ಕೊನೆಗಾಣುವುದು ನಿನ್ನಮಲ ಚಿಂತೆ;
ಆತನದೊ ಕ್ರಾಂತಿಯಲಿ. ವನದ ಪಕ್ಷಿಯು ಹಾಡಿ,
ಪ್ರಕೃತಿ ಸಂಸರ್ಗದಲಿ ದಿವ್ಯಭಾವವು ಮೂಡಿ
ಆತ್ಮವು ವಿರಾಟದಲಿ ಎಂತು ವಿಹರಿಸುವಂತೆ
ಮಾಡುವುದೊ, ಕಾವ್ಯರ್ಷಿ, ನಿನ್ನ ವಾಣಿಯ ರೀತಿ
ಅಂತಿಹುದು. ಭಿನ್ನಾಭಿಪ್ರಾಯವನು ಜಗವೆಲ್ಲ,
ಪಂಡಿತರ ಗುಂಪೆಲ್ಲ, ಘೋಷಿಸಲಿ. ನೀನೆನಗೆ
ಸಹೃದಯನು, ಕವಿವರನು: ನನ್ನೊಲ್ಮೆ ಇದೊ ನಿನಗೆ.
ನಿನ್ನ ಋಷಿಜೀವನಕೆ – ನಿನ್ನ ನಿರ್ಮಲ ನೀತಿ,
ಜನರೊಲ್ಮೆ, ಶಾಂತಿ, ಕನಿಕರ, ದಯೆಗೆ – ಎಣೆಯಿಲ್ಲ.

೨೨-೭-೧೯೩೨